ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯಿಂದ ಅಧಿಕಾರ ದುರುಪಯೋಗ : ಅರೋಪ

Update: 2018-03-01 13:21 GMT

ಬೆಂಗಳೂರು, ಮಾ.1: ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಿಡಗುಂದಿ ಬಳಿಯ ಟೋಲ್ ಪ್ಲಾಜಾ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ನೇರ ಸಹಕಾರ ನೀಡಿದ್ದಾರೆ ಎಂದು ನಾಗರಿಕ ಹಕ್ಕು ಹೋರಾಟ ಸಮಿತಿ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಟೋಲ್ ಪ್ಲಾಜಾವನ್ನು ಕೆಲವೇ ಲಕ್ಷಗಳಲ್ಲಿ ನಿರ್ಮಾಣ ಮಾಡಲು ಅವಕಾಶವಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೆ 30 ಕೋಟಿ ರೂ.ಗಳಿಗೂ ಅಧಿಕ ಪರಿಹಾರ ಪಡೆದಿದ್ದಾರೆ. ಈ ಸಂಬಂಧ ಸಚಿವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದು ಹೊರ ಬಿದ್ದಿದೆ ಎಂದು ಹೇಳಿದರು.

ವಿಜಯಪುರ ನಗರದಿಂದ 20 ಕಿ.ಮೀ. ದೂರದ ಸಿಡಗುಂದಿ ಬಳಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ವಿಠಲ್‌ಗೌಡ ರುದ್ರಗೌಡ ವಿರಾದಾರ್ ಪಾಟೀಲ್ ಹಾಗೂ ಸುಶೀಲ್ ಬಾಯ್ ಹನುಮಂತ ಹುಟ್ಟಗಿ ಎಂಬುವವರಿಂದ ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧೀನ ಮಾಡಿಕೊಂಡಿದೆ. ಈ ವೇಳೆ ಪ್ರತಿ ಚದರ ಅಡಿಗೆ 6,064 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಆದರೆ, ಸಿಡಗುಂದಿ ಗ್ರಾಮ ವ್ಯಾಪ್ತಿಯಲ್ಲಿ ವಾಣಿಜ್ಯ ಬಳಕೆಯ ಭೂಮಿ ಬೆಲೆ ಪ್ರತಿ ಚ.ಮಿ. 41 ರೂ.ಗಳು ಮಾಡಲಾಗಿದೆ. ಆದರೆ, ಇದನ್ನು ಸಾವಿರಾರು ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಜಮೀನಿನ ಮೌಲ್ಯವನ್ನು ಕೃತಕವಾಗಿ ಹೆಚ್ಚಳ ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ ಎಂದು ಅವರು ದಾಖಲೆಗಳನ್ನು ಪ್ರದರ್ಶಿಸಿದರು.

ಖರೀದಿ ಭೂ ಸ್ವಾದೀನ ವೇಳೆ ಸುತ್ತಮುತ್ತಲಿನ ಜಮೀನು ಖರೀದಿ ಪತ್ರ ಹಾಗೂ ಬೆಲೆಗಳ ವಿವರವನ್ನು ಸರಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ಆಧರಿಸಿ ಭೂ ಸ್ವಾಧೀನಕ್ಕೆ ಬೆಲೆ ನಿಗದಿಪಡಿಸಬೇಕಾಗುತ್ತದೆ. ಈ ಎಲ್ಲಾ ನಿಯಮಗಳನ್ನು ಕಡೆಗಣಿಸಿ ವಿಠಲಗೌಡರಿಗೆ 3.51 ಕೋಟಿ ಹಾಗೂ ಸುಶೀಲ್ ಬಾಯ್ ಎನ್ನುವವರಿಗೆ 2.3 ಕೋಟಿ ರೂಗಳ ಪರಿಹಾರ ಒದಗಿಸಲಾಗಿದೆ. ಇವರು 2013 ರಲ್ಲಿ ಸರಕಾರದಿಂದ 2ನೆ ಅಧಿಸೂಚನೆ ಹೊರಬೀಳುವ ಮುನ್ನ 1.60 ಸಾವಿರಕ್ಕೆ ಜಮೀನು ಖರೀದಿಸಿದ್ದಾರೆ. ಸಚಿವ ರಮೇಶ್ ಜಿಗಜಿಣಗಿ ಸರಕಾರದ ಅಧಿಕಾರ ಮತ್ತು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News