ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ : ಸೇನೆಯ ಪ್ರತಿದಾಳಿಗೆ ಪಾಕ್‌ನ ಇಬ್ಬರು ಯೋಧರ ಸಾವು

Update: 2018-03-01 14:33 GMT

ಜಮ್ಮು, ಮಾ. 1: ಜಮ್ಮು ಕಾಶ್ಮೀರದ ಭಿಂಬರ್ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿರುವುದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಪಾಕ್ ಯೋಧರು ಹತರಾಗಿದ್ದಾರೆ.

 ‘‘ಗಡಿರೇಖೆಗುಂಟದ ಭಿಂಬರ್ ಗಾಲಿ ವಲಯದಲ್ಲಿ ಬೆಳಗ್ಗೆ 8.45ಕ್ಕೆ ಪಾಕಿಸ್ತಾನ ಸೇನೆ ಆರಂಭದಲ್ಲಿ ಅನುತ್ತೇಜಿತವಾಗಿ ಹಾಗೂ ವಿವೇಚನಾರಹಿತವಾಗಿ ಸಣ್ಣ ಶಸ್ತ್ರಾಸ್ತ್ರ, ಆಟೊಮ್ಯಾಟಿಕ್ ಹಾಗೂ ಮೋರ್ಟಾರ್‌ಗಳಿಂದ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ದಾಳಿ ನಡೆಸಿತು’’ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ಪಾಕಿಸ್ತಾನದ ಕಹುಟಾದ ಯೋಧ ಮುನೀರ್ ಚೌಹಾನ್ ಹಾಗೂ ಭಿಂಬರ್‌ನ ಯೋಧ ಅಮಿರ್ ಹುಸೈನ್ ಮೃತಪಟ್ಟಿರುವುದನ್ನು ಪಾಕಿಸ್ತಾನದ ಸೇನೆಯ ಅಧಿಕೃತ ಮಾಧ್ಯಮ ಘಟಕ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಶನ್ (ಐಎಸ್‌ಪಿಆರ್) ದೃಢಪಡಿಸಿದೆ.

ಪೂಂಛ್ ಜಿಲ್ಲೆ ಮೆಂಧರ್ ಪ್ರದೇಶದ ಮಾನ್‌ಕೋಟೆ ಪ್ರದೇಶ ಹಾಗೂ ಬಾಲಕೋಟೆಯ ಗಡಿ ನಿಯಂತ್ರಣ ರೇಖೆಗುಂಟ ಆಟೋಮ್ಯಾಟಿಕ್ ಹಾಗೂ ಸಣ್ಣ ಶಸ್ತ್ರಾಸ್ತ್ರಗಳಲ್ಲದೆ ಭಾರೀ ಮೋರ್ಟಾರ್‌ಗಳಿಂದಲೂ ದಾಳಿ ನಡೆಸಲಾಗಿದೆ. ಗಡಿ ಪ್ರದೇಶದಲ್ಲಿ ವಾಹನಗಳ ಸಂಚಾರ ರದ್ದುಗೊಳಿಸಲಾಗಿದೆ ಹಾಗೂ ಮನೆಯ ಒಳಗೇ ಇರುವಂತೆ ಜನರಿಗೆ ಸೂಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಶೆಲ್ ದಾಳಿ ತೀವ್ರಗೊಂಡಿದೆ ಎಂದು ಬಾಲಕೋಟೆಯ ನಿವಾಸಿ ತಿಳಿಸಿದ್ದಾರೆ. ಆದಾಗ್ಯೂ, ಗಡಿಯಲ್ಲಿ ಭಾರತದ ಭಾಗದಲ್ಲಿ ಸಾವುನೋವುಗಳಾದ ಬಗ್ಗೆ ಇದುವರೆಗೆ ಮಾಹಿತಿ ದೊರಕಿಲ್ಲ. ಭಾರತೀಯ ಸೇನೆ ಪ್ರಬಲ ಪ್ರತಿ ದಾಳಿ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News