ರಾಜ್ಯದ ಜನತೆಗೆ ಟೋಪಿ ಹಾಕುತ್ತಿರುವ ಅಮಿತ್ ಶಾ : ಕುಮಾರಸ್ವಾಮಿ

Update: 2018-03-01 15:51 GMT

ಹುಬ್ಬಳ್ಳಿ, ಮಾ.1: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿಕೆ ನೀಡಿ, ರಾಜ್ಯದ ಜನತೆಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ವಿಕಾಸ ಪರ್ವ ಯಾತ್ರೆಗಾಗಿ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಅವರು, ಗುರುವಾರ ಹುಬ್ಬಳ್ಳಿಯ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶೀಸಿ ಮಾತನಾಡಿ, ಚುನಾವಣೆ ಹತ್ತಿರ ಇರುವ ಕಾರಣ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ಪೈಪೋಟಿಯಿಂದ ಪ್ರಚಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದರೂ, ಇಲ್ಲಿನ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಬೆಂಬಲ ಕೇಳಿಲ್ಲ: ರಾಜ್ಯಸಭೆ ಸದಸ್ಯರ ಆಯ್ಕೆಗೆ ನಮ್ಮ ಪಕ್ಷ ಯಾರ ಬೆಂಬಲ ಕೇಳಿಲ್ಲ. ಸಂಖ್ಯೆಯ ಆಧಾರದ ಮೇಲೆ ನೀಡುವುದಾದರೆ ನಮಗೆ ಒಂದು ಸ್ಥಾನ ಸಿಗಬೇಕಾಗುತ್ತದೆ. ನ್ಯಾಯಯುತವಾಗಿ ಮೂರನೆ ಅಭ್ಯರ್ಥಿ ಆಯ್ಕೆ ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಬಿಟ್ಟುಕೊಡದೆ ಮೂರನೆ ವ್ಯಕ್ತಿ ಹಾಕಿದರೆ ಪಾಠ ಕಲಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ತುಟಿಬಿಚ್ಚದ ಎರಡು ರಾಷ್ಟ್ರೀಯ ಪಕ್ಷಗಳು ಕಮಿಷನ್ ವಿಷಯ ಚರ್ಚಿಸುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದು ರಾಜ್ಯದ ಹಿತವನ್ನು ಮರೆತಿವೆ ಎಂದ ಅವರು, ಪ್ರಧಾನಿ ಮೋದಿ ಕಾಂಗ್ರೆಸ್ ಕಮಿಷನ್ ಸರಕಾರ, ನಮ್ಮದು ಮಿಷನ್ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ, ನಾನು ‘ಜನತೆಯ ಸರಕಾರ’ ಮಾಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕಾರ್ಯಕ್ರಮಕ್ಕೆ ಸೀರೆ, ಬೆಳ್ಳಿ, ಹಣ ಕೊಟ್ಟು ಜನರನ್ನು ಕರೆತರುತ್ತಿಲ್ಲ. ಗ್ರಾಮೀಣ ಭಾಗದ ಜನರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಹಣದ ಆಮಿಷ ನೀಡಿ ಜನರನ್ನು ಕರೆದುಕೊಂಡು ಬರುತ್ತಿವೆ ಎಂದು ಆರೋಪಿಸಿದರು.

ಯಡಿಯೂರಪ್ಪ ರೈತ ನಾಯಕನಲ್ಲ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲಮನ್ನಾ ಮಾಡಲು ಒತ್ತಾಯ ಮಾಡಿದಾಗ ಕೇಂದ್ರ ಸರಕಾರ ನೋಟು ಮುದ್ರಣ ಯಂತ್ರ ಕೊಟ್ಟಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಹೀಗಾಗಿ, ಯಡಿಯೂರಪ್ಪಹೇಗೆ ರೈತ ನಾಯಕರಾಗುತ್ತಾರೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಎರಡರಿಂದ ಮೂರು ಕ್ಷೇತ್ರದಲ್ಲಿ ಜಯಗಳಿಸುತ್ತದೆ. ರಾಜ್ಯದ ಇತಿಹಾಸದಲ್ಲಿ ಚುನಾವಣೆ ಘೋಷಣೆ ಆಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಾವೇ. ಮೊದಲ ಪಟ್ಟಿ ಬಿಡುಗಡೆ ಆದಾಗ ಅನೇಕರು ಲಘುವಾಗಿ ಮಾತನಾಡಿದ್ದಾರೆ. ಚುನಾವಣೆ ಮೂಲಕ ಅವರಿಗೆ ಉತ್ತರಿಸುತ್ತೇನೆ ಎಂದರು.

ಸರಕಾರ ವಿದ್ಯುತ್ ಉತ್ಪಾದನೆ ಬಗ್ಗೆ ಜಂಬಕೊಚ್ಚಿಕೊಳ್ಳುತ್ತಿದೆ. 2 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಏಕೆ ಉತ್ಪಾದನೆಯಾಗಿಲ್ಲ ಎಂದು ಪ್ರಶ್ನಿಸಿದ ಅವರು, ಯರಮರಸ್ ವಿದ್ಯುತ್ ಘಟಕ ಉದ್ಘಾಟನೆಗೆ ದೊಡ್ಡದಾಗಿ ಜಾಹೀರಾತು ಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದೆ. ಈ ಘಟಕ ಸ್ಥಾಪನೆಗೆ ನಿಮ್ಮ ಕೊಡುಗೆ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೀವು ಕುದುರೆ ಏರಿದ್ದು, 3,800 ರೈತರ ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಾ ಎಂದು ಕುಟುಕಿದರು.

ಉತ್ತರ ಕರ್ನಾಟಕ ಭಾಗದ ಹತ್ತಿ ಕಾರ್ಖಾನೆಗಳಿಗೆ ಯಾವುದೇ ಉತ್ತೇಜನ ಇಲ್ಲ. ಕಾರ್ಖಾನೆ ಮುಚ್ಚುವುದೇ ಸರಕಾರದ ಸಾಧನೆ. ನಿರುದ್ಯೋಗ ಸಮಸ್ಯೆ. ಬಿಎ, ಬಿಎಡ್ ಓದಿದ ಮಕ್ಕಳಿಗೆ ಯಾವ ಉದ್ಯೋಗ ಕೊಟ್ಟಿದ್ದಾರೆ. 15ರೂ.ಗೆ ಸಿಗುವ ಒಂದು ಕ್ವಾರ್ಟರ್ ಮದ್ಯವನ್ನು 90ರೂ.ಗೆ ಮಾರಾಟ ಮಾಡುತ್ತಾರೆ. ಅನ್ನಭಾಗ್ಯದಿಂದ ಯಾರಿಗೂ ಉಪಯೋಗವಾಗಿಲ್ಲ ಎಂದು ಸರಕಾರದ ವಿರುದ್ಧ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News