ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿಗೆ ಕಾರಣವಾಗಿರುವ ಕಾರ್ತಿ ಚಿದಂಬರಂ ಪ್ರಕರಣ

Update: 2018-03-01 16:27 GMT

ಹೊಸದಿಲ್ಲಿ, ಮಾ.1: ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿಯನ್ನು ಸಿಬಿಐ ಬಂಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಆರಂಭವಾಗಿದೆ. ಚಿದಂಬರಂ ವಿತ್ತ ಸಚಿವರಾಗಿದ್ದ ಸಮಯದಲ್ಲಿ ಕಾರ್ತಿ ದೃಶ್ಯ ಮಾಧ್ಯಮ ಸಂಸ್ಥೆಯೊಂದರ ವಿದೇಶಿ ಹೂಡಿಕೆಗೆ ಅನುಮತಿಯನ್ನು ಪಡೆಯುವಲ್ಲಿ ನೆರವಾಗಿದ್ದರು ಎಂದು ಸಿಬಿಐ ಆರೋಪಿಸಿದೆ. ಕಾರ್ತಿ ಬಂಧನವನ್ನು ಕಾಂಗ್ರೆಸ್ ದ್ವೇಷ ರಾಜಕಾರಣ ಎಂದು ವ್ಯಾಖ್ಯಾನಿಸಿದ್ದರೆ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆರೋಪಿಯ ವಿರುದ್ಧ ಸಿಕ್ಕಿರುವ ಸಾಕ್ಷಿಯೇ ಎಲ್ಲವನ್ನೂ ಹೇಳುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಮೇನಲ್ಲಿ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ಹಾಗೂ ಕಾರ್ತಿಯ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಮಾಲಕತ್ವದ ಐಎನ್‌ಎಕ್ಸ್ ಮೀಡಿಯ ಸಂಸ್ಥೆಗೆ ಕಾರ್ತಿ ಚಿದಂಬರಂ ನಿಯಮಬಾಹಿರವಾಗಿ ನೆರವು ನೀಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು. 2007ರ ಮಾರ್ಚ್‌ನಲ್ಲಿ ಮುಖರ್ಜಿ ದಂಪತಿ ವಿದೇಶಿ ಕಂಪೆನಿಗಳಿಂದ 4.62 ಕೋ. ರೂ. ಬಂಡವಾಳ ಪಡೆಯಲು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್‌ಐಪಿಬಿ) ಯ ಅನುಮತಿಯನ್ನು ಕೋರಿತ್ತು.

ಜೊತೆಗೆ ಐಎನ್‌ಎಕ್ಸ್ ನ್ಯೂಸ್‌ನಲ್ಲಿ ಶೇ.26 ಹೂಡಿಕೆ ಮಾಡಲು ಅನುಮತಿಯನ್ನೂ ಕೋರಿತ್ತು. ಐದರಿಂದ ಆರು ಸದಸ್ಯರಿದ್ದ ಎಫ್‌ಐಪಿಬಿ ಸಮಿತಿಯು 2007ರ ಮೇನಲ್ಲಿ 4.62 ಕೋ. ರೂ. ಬಂಡವಾಳ ಪಡೆಯಲು ಅನುಮತಿ ನೀಡಿದರೂ ಐಎನ್‌ಎಕ್ಸ್ ನ್ಯೂಸ್‌ನಲ್ಲಿ ಶೇ.26 ಹೂಡಿಕೆಗೆ ಮಾತ್ರ ನಿರಾಕರಿಸಿತ್ತು. ಆದರೆ ಸಿಬಿಐ ಪ್ರಕಾರ, ಐಎನ್‌ಎಕ್ಸ್ ಮೀಡಿಯ ಪ್ರತಿ ಶೇರನ್ನು 800 ರೂ.ಗೆ ಮಾರಾಟ ಮಾಡುವ ಮೂಲಕ 305 ಕೋ.ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಿತು. ಜೊತೆಗೆ ಅನುಮತಿ ಇಲ್ಲದೆಯೇ ಐಎನ್‌ಎಕ್ಸ್ ನ್ಯೂಸ್‌ನಲ್ಲಿ ಶೇ.26 ಹೂಡಿಕೆ ಮಾಡಿತು.

ಆದಾಯ ತೆರಿಗೆ ಇಲಾಖೆಯ ಸೂಚನೆಯಂತೆ ವಿದೇಶಿ ಹೂಡಿಕೆ ಮಂಡಳಿಯು ಐಎನ್‌ಎಕ್ಸ್ ಬಳಿ ಈ ಉಲ್ಲಂಘನೆಗೆ ವಿವರಣೆಯನ್ನು ಕೇಳಿದಾಗ ಮುಖರ್ಜಿ ದಂಪತಿ ಪ್ರಕರಣವನ್ನು ಮುಚ್ಚಿಹಾಕಲು ಕಾರ್ತಿ ಚಿದಂಬರಂ ನೆರವನ್ನು ಕೋರಿದ್ದರು ಎಂದು ಸಿಬಿಐ ಆರೋಪಿಸಿದೆ.ಐಎನ್‌ಎಕ್ಸ್ ಮೀಡಿಯವು 2008ರ ಜೂನ್ 26ರಂದು ಎಫ್‌ಐಪಿಬಿಯ ಪ್ರಶ್ನೆಗೆ ಉತ್ತರಿಸಿದ್ದರು. ಇದೇ ದಿನ ಕಾರ್ತಿಗೆ ಸೇರಿದ ಎಡ್ವಾಂಟೇಜ್ ಕನ್ಸಲ್ಟಿಂಗ್ ಕಂಪೆನಿಗೆ ಹತ್ತು ಲಕ್ಷ ರೂ. ಪಾವತಿಯಾಗಿರುವುದು ಪತ್ತೆಯಾಗಿದೆ ಎಂದು ಸಿಬಿಐ ಆರೋಪಿಸಿದೆ.

ಐಎನ್‌ಎಕ್ಸ್ ನ್ಯೂಸ್‌ನಲ್ಲಿ ಹೂಡಿಕೆ ಮಾಡಲು ಅನುಮತಿ ಪಡೆಯುವಂತೆ ವಿತ್ತ ಸಚಿವಾಲಯ ಐಎನ್‌ಎಕ್ಸ್ ಮೀಡಿಯಕ್ಕೆ ಸಲಹೆ ನೀಡಿತ್ತು. ಇದೇ ಸಮಯದಲ್ಲಿ ಎಡ್ವಾಂಟೇಜ್ ಕನ್ಸಲ್ಟಿಂಗ್ ಹಾಗೂ ಅದರ ಸಹಸಂಸ್ಥೆಗಳು 3.10 ಕೋ.ರೂ. ಬಂಡವಾಳ ಸ್ವೀಕರಿಸಿದ್ದವು ಎಂದು ಸಿಬಿಐ ಆರೋಪಿಸಿದೆ.

ಹೊಸ ಪ್ರಸ್ತಾವ ಕಳುಹಿಸಿದಾಗ ತೆರಿಗೆ ಇಲಾಖೆಯ ವಿರೋಧದ ನಡುವೆಯೂ ಎಫ್‌ಐಪಿಬಿ ಅನುಮತಿಯನ್ನು ನೀಡಿತ್ತು. ವಿತ್ತ ಸಚಿವರು ಈ ಹೊಸ ಮನವಿಗೆ ಸಹಿ ಹಾಕುವ ಮೂಲಕ ಈ ಹಿಂದೆ ಸಂಸ್ಥೆಯು ಅನುಮತಿ ಪಡೆಯದೆ ಮಾಡಿದ ಕೆಲಸವನ್ನು ಅಧಿಕೃತಗೊಳಿಸಿದರು. ಎಡ್ವಾಂಟೇಜ್ ಕನ್ಸಲ್ಟಿಂಗ್ ಜೊತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಕಾರ್ತಿ ತಿಳಿಸಿದ್ದಾರೆ. ಈ ಸಂಸ್ಥೆ ಐಎನ್‌ಎಕ್ಸ್ ಮೀಡಿಯ ಜೊತೆ ಮಾಡಿಕೊಂಡಿರುವ ಒಪ್ಪಂದದಲ್ಲಿ ತನ್ನನ್ನು ಸಿಕ್ಕಿಹಾಕಿಸಲು ಸಿಬಿಐ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಚಿದಂಬರಂ, ವಿತ್ತ ಸಚಿವನಾಗಿ ಹಿರಿಯ ಅಧಿಕಾರಿಗಳ ಸಮಿತಿ ನೀಡಿದ ಸಲಹೆಯನ್ನಷ್ಟೇ ನಾನು ಪಾಲಿಸಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News