ಚಿಕ್ಕಮಗಳೂರು; ಚುನಾವಣೆ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಿಸಿ ಶ್ರೀರಂಗಯ್ಯ

Update: 2018-03-01 16:59 GMT

ಚಿಕ್ಕಮಗಳೂರು,ಮಾ.1: ಬರಲಿರುವ ಚುನಾವಣೆಗೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಚುನಾವಣಾ ಅಧಿಸೂಚನೆ ಹೊರಬಿದ್ದ ನಂತರ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಸುಗಮ ಮತ್ತು ನೈತಿಕ ಚುನಾವಣೆ ಮಾಡುವ ನಿಟ್ಟಿನಲ್ಲಿ ಈ ಬಾರಿ ದಿವ್ಯಾಂಗ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಕಾರಣಕ್ಕೆ ಅಂತಹ ಮತದಾರಿಗೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಫೆ.28ರಂದು ಬಿಡುಗಡೆಮಾಡಲಾದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಮತದಾರರ ಅಂತಿಮ ಮತಪಟ್ಟಿ ಕುರಿತು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು. ಈ ಬಾರಿ ದಿವ್ಯಾಂಗ ಮತದಾರರು ಯಾವುದೇ ಕಾರಣಕ್ಕೂ ಮತದಾನದಿಂದ ಹೊರಗುಳಿಯದಂತೆ ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದ ಅವರು, ಈ ಬಾರಿ ಎಲ್ಲರನ್ನೊಳಗೊಳ್ಳುವ ಸುಗಮ ಮತ್ತು ನೈತಿಕ ಚುನಾವಣೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಘೋಷವಾಖ್ಯ ಲಾಂಛನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 4,57,331 ಪುರುಷ ಮತದಾರರು, 4,55,200 ಮಹಿಳೆಯರು, 59 ಇತರೆ ಮತದಾರರು ಸೇರಿದಂತೆ ಒಟ್ಟು 9,12,590 ಮತದಾರರಿದ್ದಾರೆ. ಇದರಲ್ಲಿ ಹೊಸದಾಗಿ ಸೇರ್ಪಡೆಗೊಂಡ 18ರಿಂದ 19ವರ್ಷದ 8,266 ಮತ್ತು 19 ವರ್ಷ ಮೇಲ್ಪಟ್ಟ 17,434 ಮತದಾರರು ಸೇರಿ ಒಟ್ಟು 25,700 ಮತದಾರರು ಹೊಸದಾಗಿ ಸೇರ್ಪಡೆ ಗೊಂಡಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಮತದಾರರಲ್ಲಿ 18 ರಂದ 19 ವರ್ಷದ 4,698 ಪುರುಷರು, 19 ವರ್ಷ ಮೇಲ್ಪಟ್ಟವರಲ್ಲಿ 7,654 ಮತದಾರರಿದ್ದಾರೆ. 18 ರಿಂದ 19 ವರ್ಷದ 3,566 ಮತ್ತು 19 ವರ್ಷ ಮೇಲ್ಪಟ್ಟ 9,778 ಮಹಿಳಾ  ಮತದಾರರಿದ್ದಾರೆ. 18 ರಿಂದ 19 ವರ್ಷದ 2 ಮತ್ತು 19 ವರ್ಷ ಮೇಲ್ಪಟ್ಟು 2 ಮತದಾರರು ಸೇರಿ ಒಟ್ಟು 4 ಇತರ ಮತದಾರರಿದ್ದಾರೆ. ಪ್ರತೀ ಬಾರಿ ಚುನಾವಣೆ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಯನ್ನು ತರಲಾಗುತ್ತಿದ್ದು, ಮತದಾನಕ್ಕೆ ಈ ಬಾರಿ ಇವಿಎಂ ಹಾಗೂ ವಿವಿ ಪ್ಯಾಟ್ ಬಳಸಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದ ನಂತರ ಇದರ ಪ್ರಾತ್ಯಕ್ಷಿಕೆಯನ್ನು ಮಾಧ್ಯಮದವರ ಹಾಗೂ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ನೀಡಿ, ನಂತರ ಮತದಾರರಿಗೆ ಈ ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.

ಈಗಾಗಲೇ ಬಿಡುಗಡೆ ಮಾಡಿರುವ ಮತದಾರರ ಅಂತಿಮ ಮತಪಟ್ಟಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಮತಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ತಮ್ಮ ಮತ ಕ್ಷೇತ್ರ, ಮತಗಟ್ಟೆ ಸೇರಿದಂತೆ ಮತ್ತಿತರ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು 9731979899 ಗೆ ತಮ್ಮ ಎಪಿಕ್ ಕಾರ್ಡ್ ನಂಬರ್ ಅನ್ನು ಎಸ್.ಎಂ.ಎಸ್ ಕಳುಹಿಸಿ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಮರಳು ಪರ್ಮಿಟ್‍ಗಳ ದುರಪಯೋಗ ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಪ್ರಕರಣದ ಆರೋಪಿಗಳನ್ನು ಉಡುಪಿ ಪೊಲೀಸರ ವಶಕ್ಕೆ ನೀಡಲಾಗಿದ್ದು, ಅಲ್ಲಿನ ಎಸ್ಪಿ ತನಿಖಾ ವರದಿ ನೀಡಿದ ನಂತರ ತಪ್ಪಿತಸ್ಥ ಅಧಿಕಾರಿಗಳು, ನೌಕರರ ವಿರುದ್ಧ ಇಲಾಖಾ ತನಿಖೆಗೆ ಕ್ರಮ ವಹಿಸಲಾಗುವುದು.
-ಶ್ರೀರಂಗಯ್ಯ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News