ಚತ್ತೀಸ್‌ಗಢದಲ್ಲಿ ಎನ್‌ಕೌಂಟರ್: ನಾಯಕ ಸೇರಿದಂತೆ ಕನಿಷ್ಠ 12 ಮಾವೊವಾದಿಗಳು ಹತ

Update: 2018-03-02 16:55 GMT

- ಕನಿಷ್ಠ 10 ಮಾವೊವಾದಿಗಳು ಬಲಿ

- ಮುಂಜಾನೆ ಎನ್‌ಕೌಂಟರ್ ಆರಂಭ

- ‘ಗ್ರೇಹೌಂಡ್ಸ್’ನ ಸಿಬ್ಬಂದಿ ಹುತಾತ್ಮ

ರಾಯಪುರ, ಮಾ. 2: ತೆಲಂಗಾಣ-ಚತ್ತೀಸ್‌ಗಢದ ಗಡಿ ಸಮೀಪ ಶುಕ್ರವಾರ ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ಉನ್ನತ ನಾಯಕ ಸೇರಿಂತೆ ಕನಿಷ್ಠ 12 ಮಂದಿ ಮಾವೋವಾದಿಗಳು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚತ್ತೀಸ್‌ಗಢ ರಾಜಧಾನಿ ರಾಯಪುರದಿಂದ 500 ಕಿ.ಮೀ. ದೂರದಲ್ಲಿರುವ ಪೂಜಾರಿ ಕಂಕೇರ್ ಸಮೀಪದ ಗಡಿ ಪ್ರದೇಶದಲ್ಲಿ ತೆಲಂಗಾಣ, ಆಂಧ್ರಪ್ರದೇಶದ ಮಾವೋವಾದಿ ವಿರೋಧಿ ಗ್ರೇಹೌಂಡ್ಸ್ ತಂಡ, ಒರಿಸ್ಸಾ ಹಾಗೂ ಮಹಾರಾಷ್ಟ್ರದ ವಿಶೇಷ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

‘‘ಪೂಜಾರಿ ಕಂಕೇರ್‌ನ ಅರಣ್ಯದಲ್ಲಿ ಮುಂಜಾನೆ ಎನ್‌ಕೌಂಟರ್ ಆರಂಭವಾಯಿತು. ಗುಂಡಿನ ಚಕಮಕಿಯಲ್ಲಿ 10 ಮಂದಿ ಮಾವೋವಾದಿಗಳು ಹತರಾದರು’’ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಪ್ರಧಾನ ನಿರ್ದೇಶಕ ಡಿ.ಎಂ. ಅಶ್ವಥಿ ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಇತರ ಮೂವರು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಭದ್ರಾಚಲಂನಲ್ಲಿರುವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಗತ್ಯ ಬಿದ್ದರೆ ರಾಯುಪುರದ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಹತರಾದ ಮಾವೋವಾದಿಗಳಲ್ಲಿ ಮಾವೋವಾದಿ ತೆಲಂಗಾಣ ರಾಜ್ಯ ಸಮಿತಿ ಕಾರ್ಯದರ್ಶಿ ಹರಿಭೂಷಣ್ ಆಲಿಯಾಸ್ ಜಗನ್ ಹಾಗೂ ಕರೀಂನಗರ-ಖಮ್ಮಮ್-ವಾರಂಗಲ್ ವಿಭಾಗೀಯ ಸಮಿತಿ ಕಾರ್ಯದರ್ಶಿ ಬಡೆ ಚೊಕ್ಕಾ ರಾವ್ ಆಲಿಯಾಸ್ ದಾಮೋದರ್ ಒಳಗೊಂಡಿದ್ದಾರೆ. ಎಲ್ಲ ಮಾವೊವಾದಿಗಳ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಹತರಾದ ಮಾವೋವಾದಿಗಳಲ್ಲಿ ಇನ್ನಷ್ಟು ನಾಯಕರು ಇರುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ 47, ಒಂದು ಎಸ್‌ಎಲ್‌ಆರ್ ಹಾಗೂ ನಾಲ್ಕು ಐಎನ್‌ಎಸ್‌ಎಎಸ್ ರೈಫಲ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತರು ಅವಿತಿರುವ ಸಾಧ್ಯತೆ ಇರುವುದರಿಂದ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೋಹಿತ್ ಗರ್ಗ್ ತಿಳಿಸಿದ್ದಾರೆ. ಮಾಹಿತಿಯೊಂದರ ಪ್ರಕಾರ ಸುಮಾರು 150 ಮಾವೊವಾದಿಗಳು ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಇತ್ತೀಚೆಗೆ ನಡೆದ ಅತಿ ದೊಡ್ಡ ಎನ್‌ಕೌಂಟರ್ ಇದಾಗಿದ್ದು, ಇದರಿಂದ ಮಾವೋವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾವೋವಾದಿ ಸಿದ್ಧಾಂತದ ಬಗ್ಗೆ ಒಲವುಳ್ಳ ಪಿ. ವರ ವರ ರಾವ್ ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ್ದಾರೆ. ‘‘ಪೊಲೀಸರು ಮಾವೋವಾದಿಗಳನ್ನು ಎರಡು ದಿನಗಳ ಹಿಂದೆಯೇ ಬಂಧಿಸಿದ್ದಾರೆ. ಇಂದು ಬೆಳಗ್ಗೆ ಹತ್ಯೆಗೈದಿದ್ದಾರೆ.’’ ಎಂದು ಆಪಾದಿಸಿದ್ದಾರೆ. ಈ ಎನ್‌ಕೌಂಟರ್ ಬಗ್ಗೆ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News