ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಮತ್ತೆ ತೊಂದರೆ: ದೇವೇಗೌಡ

Update: 2018-03-02 13:40 GMT

ಹಾಸನ,ಮಾ.02: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಮತ್ತೆ ತೊಂದರೆ ಆಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದರು.

ನಗರದ ಗೊರೂರಿನಲ್ಲಿ ಹೇಮಾವತಿ ಜಲಾಶಯವನ್ನು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ಮೂರು ಜನ ನ್ಯಾಯಾಧೀಶರು ತೀರ್ಪನ್ನು ಕೊಟ್ಟಿದ್ದಾರೆ. ಆರು ವಾರದ ಒಳಗೆ ಕಾವೇರಿ ನಿರ್ವಹಣಾ ಮಂಡಲಿ ರಚನೆ ಮಾಡಲೇಬೇಕು ಎಂದು ಹೇಳಿದ್ದಾರೆ. ನೀರಿಲ್ಲದೆ ನಾವೇ ಕಷ್ಟದಲ್ಲಿ ಇದ್ದೇವೆ ಎಂಬುದನ್ನು ಸರಕಾರಕ್ಕೆ ತಿಳಿಸಲಾಗಿದ್ದರೂ, ಈ ತಿಂಗಳ 5 ಮತ್ತು 6 ರಂದು ನಾನು ದೆಹಲಿಗೆ ತೆರಳಿ, ಕೇಂದ್ರ ಸಚಿವ ಗಡ್ಕರಿಗೂ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ರಾಜ್ಯ ಸರಕಾರದ ಮೇಲೆ ಆಗಲಿ, ಬಿಜೆಪಿಯ ಕೇಂದ್ರ ಸರಕಾರದ ಮೇಲೆ ಆಗಲಿ ದೋಷಾರೋಪ ಮಾಡದೆ ಎಲ್ಲಾ ಒಗ್ಗಟಾಗಿ ರಾಜ್ಯಕ್ಕೆ ಆಗಿರುವ ಪೆಟ್ಟನ್ನು ಸರಿಪಡಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತೇನೆ. ಸುಪ್ರಿಂ ಕೋರ್ಟ್ ತೀರ್ಪ ನಮ್ಮ ಪರವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಪಕ್ಷವಾದರೂ ಒಬ್ಬರಿಗೊಬ್ಬರೂ ಕಚ್ಚಾಡದೆ, ತಮಿಳುನಾಡಿನ ರಾಜಕೀಯದ ಬಗ್ಗೆ ನಾವು ಕಲಿತು ಮುಂದಿನ ಹೆಜ್ಜೆ ಹಾಕಬೇಕು. ನಾರಿಮುನಿಯರ್ ಅವರು ವಾದ ಮಾಡಲು ಹೋಗಿದ್ದಾರೆ. ಹಾರಂಗಿ, ಹೇಮಾವತಿ, ಕೆ.ಆರ್.ಎಸ್. ಕಬಿನಿ ಜಲಾಶಯದ ವಿಷಯವನ್ನು ಸಂಗ್ರಹ ಮಾಡಿ ವಿಷಯ ಮಂಡನೆಯಲ್ಲಿ ಎಲ್ಲಾ ಮಾಹಿತಿ ನೀಡಲಾಗುವುದು. ನೀರಿನ ವಿಚಾರದಲ್ಲಿ ಕೇಂದ್ರ ಸರಕಾರದ ಜವಬ್ದಾರಿಯೂ ಕೂಡ ಇದೆ. ಕುಳಿತು ಚರ್ಚೆ ಮಾಡುವುದರ ಮೂಲಕ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸುಪ್ರೀಂ ಸೂಚನೆಯಂತೆ ನಿರ್ವಹಣಾ ಮಂಡಳಿ ಕಷ್ಟಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಗಡ್ಕರಿ ಹೇಳಿದ್ದರು. ಈ ಹೇಳಿಕೆ ರಾಜ್ಯಕ್ಕೆ ತಕ್ಷಣಕ್ಕೆ ಬೀಳಬಹುದಾಗಿದ್ದ ಪೆಟ್ಟನ್ನು ದೂರ ಮಾಡಿದೆ. ಈ ಕಾರಣಕ್ಕೆ ನಾನು ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ನನ್ನ ನಾಡಿನ ಜನರಿಗೆ ಅನುಕೂಲವಾಗುವ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದರು.

ಈ ವೇಳೆ ಶಾಸಕರಾದ ಹೆಚ್.ಎಸ್. ಪ್ರಕಾಶ್, ಹೆಚ್.ಕೆ. ಕುಮಾರಸ್ವಾಮಿ ಹಾಗೂ ಹೇಮಾವತಿ ಜಲಾಶಯದ ಇಂಜಿನಿಯರ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News