ತಾಯಿಯ ಮನವಿ: ತೀವ್ರವಾದಿಗಳನ್ನು ತೊರೆದು ಮನೆಗೆ ಮರಳಿದ ಕಾಶ್ಮೀರದ ಯುವಕ

Update: 2018-03-02 14:26 GMT

ಜಮ್ಮು, ಮಾ.2: ಕಾಶ್ಮೀರದಲ್ಲಿ ತೀವ್ರವಾದಿಗಳ ಜತೆ ಸೇರಿಕೊಂಡಿದ್ದ ಯುವಕನೊಬ್ಬ ತನ್ನ ತಾಯಿ ಮಾಡಿದ ಕಳಕಳಿಯ ಮನವಿಗೆ ಸ್ಪಂದಿಸಿ ಹಿಂಸೆ ತೊರೆದು ಮನೆಗೆ ಮರಳಿದ್ದಾನೆ ಎಂದು ಡಿಜಿಪಿ ಎಸ್ಪಿ ವೈದ್ ಹೇಳಿದ್ದಾರೆ.  

ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ ಯುವಕನ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಆದರೆ ಉಗ್ರವಾದ ತೊರೆದು ಮನೆಗೆ ಮರಳಿದ ಯುವಕನ ವಯಸ್ಸನ್ನು ಬಹಿರಂಗ ಪಡಿಸಲಾಗಿಲ್ಲ. ಕಳೆದ ವರ್ಷ ಒಟ್ಟು ನಾಲ್ಕು ಮಂದಿ ಯುವಕರು ಉಗ್ರವಾದ ತೊರೆದು ಮುಖ್ಯವಾಹಿನಿಗೆ ಮರಳಿದ್ದರು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಧಾನಸಭೆಯಲ್ಲಿ ಬಿಜೆಪಿ ಎಂಎಲ್‍ಸಿ ವಿಕ್ರಮ್ ರಂಧವ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.

ಉಗ್ರವಾದ ಸೇರಿದ ಯುವಕರ ಮನವೊಲಿಸಿ ಅವರು ಹಿಂಸೆ ಕೈಬಿಡುವಂತೆ ಮಾಡಲು ಪ್ರೇರೇಪಿಸಲು ಅವರ ಕುಟುಂಬಗಳಿಗೆ ಕೌನ್ಸಲಿಂಗ್ ಒದಗಿಸಲು ಪ್ರಯತ್ನಿಸಲಾಗುವುದು ಎಂದೂ ಮುಖ್ಯಮಂತ್ರಿ ತಿಳಿಸಿದ್ದರು.

ಪ್ರತಿಯೊಂದು ಪೊಲೀಸ್ ಠಾಣಾ ಮಟ್ಟದಲ್ಲಿ ಯೂತ್ ಕ್ಲಬ್ ಗಳನ್ನು ಸ್ಥಾಪಿಸಿ ಯುವಕರಿಗೆ ಮಾಹಿತಿ ತಂತ್ರಜ್ಞಾನ ಹಾಗೂ ಒಳಾಂಗಣ ಕ್ರೀಡೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿ ಅವರ ಮನಸ್ಸು ಅನಗತ್ಯ ವಿಷಯಗಳತ್ತ ಗಮನ ಹರಿಸದಂತೆ ಪ್ರಯತ್ನ ನಡೆಸಲಾಗುತ್ತದೆ ಎಂದೂ ಮುಖ್ಯಮಂತ್ರಿ ಹೇಳಿದ್ದರು.

ಯುವಕರನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಉಗ್ರವಾದದತ್ತ ಆಕರ್ಷಿಸಲಾಗುತ್ತಿರುವುದರಿಂದ ಈ ನಿಟ್ಟಿನಲ್ಲಿಯೂ ನಿಗಾ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News