ಮೂರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಪ್ರಕಟ

Update: 2018-03-02 17:58 GMT

ಹೊಸದಿಲ್ಲಿ,ಮಾ.2: ಮೂರು ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ವಿಧಾನಸಭೆಗಳಿಗೆ ನಡೆಸಿರುವ ಚುನಾವಣೆಗಳ ಮತಎಣಿಕೆಯು ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಬಿಗುಭದ್ರತೆಯ ನಡುವೆ ಆರಂಭವಾಗಲಿದೆ.

ಎಲ್ಲ ಮೂರೂ ರಾಜ್ಯಗಳಲ್ಲಿ ಬಿಜೆಪಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದು, ಅದು ತ್ರಿಪುರಾದಲ್ಲಿ ಎಡರಂಗದ 25 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಲಿದೆ ಮತ್ತು ಇತರ ಎರಡು ರಾಜ್ಯಗಳಲ್ಲಿ ತನ್ನ ಬುನಾದಿಯನ್ನು ಭದ್ರಗೊಳಿಸಿಕೊಳ್ಳಲಿದೆ ಎಂದು ಎರಡು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಕಾಂಗ್ರೆಸ್ ಮೇಘಾಲಯವನ್ನು ಕಳೆದ ಹತ್ತು ವರ್ಷಗಳಿಂದ ಆಳುತ್ತಿದ್ದರೆ, 2008ರಲ್ಲಿ ಮೂರು ತಿಂಗಳ ರಾಷ್ಟ್ರಪತಿ ಆಡಳಿತದ ಅವಧಿಯನ್ನು ಹೊರತುಪಡಿಸಿದರೆ 2003 ರಿಂದಲೂ ಅಲ್ಲಿ ಆಡಳಿತದ ಚುಕ್ಕಾಣಿ ನಾಗಾ ಪೀಪಲ್ಸ್ ಫ್ರಂಟ್(ಎನ್‌ಎಫ್‌ಪಿ)ನ ಕೈಯಲ್ಲಿದೆ.

ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ತನ್ನ ಸರಕಾರಗಳ ರಚನೆಯಿಂದ ಉತ್ತೇಜಿತಗೊಂಡಿರುವ ಬಿಜೆಪಿ ಈಶಾನ್ಯ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.

ತ್ರಿಪುರಾದಲ್ಲಿ ಫೆ.18ರಂದು ಮತದಾನ ನಡೆದಿದ್ದರೆ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಫೆ.27ರಂದು ಚುನಾವಣೆಗಳು ನಡೆದಿದ್ದವು. ಮೂರೂ ವಿಧಾನಸಭೆಗಳ ಸದಸ್ಯಬಲ ತಲಾ 60 ಆಗಿದ್ದರೂ, ವಿವಿಧ ಕಾರಣಗಳಿಂದಾಗಿ ಅವುಗಳ 59 ಸ್ಥಾನಗಳಿಗಾಗಿ ಚುನಾವಣೆಗಳು ನಡೆದಿದ್ದವು.

ತ್ರಿಪುರಾದಲ್ಲಿ ಸಿಪಿಎಂ ಅಭ್ಯರ್ಥಿಯೋರ್ವರು ನಿಧನರಾಗಿದ್ದರೆ, ಮೇಘಾಲಯದಲ್ಲಿ ಎನ್‌ಸಿಪಿ ಅಭ್ಯರ್ಥಿಯ ಹತ್ಯೆಯಾಗಿತ್ತು. ಹೀಗಾಗಿ ಅವೆರಡೂ ರಾಜ್ಯಗಳಲ್ಲಿ ತಲಾ ಒಂದು ಮತಕ್ಷೇತ್ರದಲ್ಲಿ ಮತದಾನವನ್ನು ರದ್ದುಗೊಳಿಸಲಾಗಿತ್ತು. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮುಖ್ಯಸ್ಥ ನೆಫಿಯು ರಿಯೊ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಘಾಲಯದಲ್ಲಿ ಕಾಂಗ್ರೆಸ್ 59 ಮತ್ತು ಬಿಜೆಪಿ 47 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಇದೇ ಮೊದಲ ಬಾರಿಗೆ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ರಿಯೊ ನೇತೃತ್ವದ ಎನ್‌ಡಿಪಿಪಿಯೊದಿಗೆ ಬಿಜೆಪಿಯು ಮೈತ್ರಿ ಮಾಡಿಕೊಂಡಿದೆ. ಅದು 20 ಕ್ಷೇತ್ರಗಳಲ್ಲಿ ಮತ್ತು ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ಕೇವಲ 18 ಸ್ಥಾನಗಳಿಗೆ ಸ್ಪರ್ಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News