ಅಯೋಧ್ಯಾ ವಿವಾದ: ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತೇವೆ; ಮೌಲಾನಾ ಸಲ್ಮಾನ್ ನದ್ವಿ

Update: 2018-03-02 15:40 GMT

ಲಕ್ನೊ, ಮಾ.2: ವಿವಾದಿತ ಅಯೋಧ್ಯಾ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಕಾಯುತ್ತೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಯ ಉಚ್ಛಾಟಿತ ಸದಸ್ಯ ವೌಲಾನಾ ಸಲ್ಮಾನ್ ನದ್ವಿ ತಿಳಿಸಿದ್ದಾರೆ.

ವಿವಾದಿತ ಪ್ರದೇಶಕ್ಕೆ ಸಂಬಂಧಿಸಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಅವರೊಂದಿಗೆ ನ್ಯಾಯಾಲಯದ ಹೊರಗೆ ಮಾತುಕತೆ ನಡೆಸಲಾಗುವುದು ಎಂದು ನದ್ವಿ ಈ ಹಿಂದೆ ಹೇಳಿಕೆ ನೀಡಿದ್ದರು. ಸದಸ್ಯರಾದ ಅಸಾದುದ್ದೀನ್ ಉವೈಸಿ, ಕಮಲ್ ಫಾರೂಕಿ, ಖಾಸಿಮ್ ರಸೂಲ್ ಮತ್ತು ಯೂಸುಫ್ ಮಚಲ ಅವರನ್ನು ಉಚ್ಛಾಟಿಸಿದರೆ ಮಾತ್ರ ತಾನು ಮಂಡಳಿಗೆ ಮರು ಸೇರ್ಪಡೆಗೊಳ್ಳುವುದಾಗಿ ನದ್ವಿ ಷರತ್ತು ಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಸಂದೇಶ ಹಾಕಿರುವ ನದ್ವಿ, ಹೆಚ್ಚಿನ ಹಿಂದೂ ಮತ್ತು ಮುಸ್ಲಿಮರು ಮಾತಿನ ಮೂಲಕ ಈ ವಿವಾದವನ್ನು ಬಗೆಹರಿಸಲು ಸಿದ್ಧರಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಯೋಧ್ಯಾ ವಿವಾದಕ್ಕೆ ಪರಿಹಾರವು ದೊರೆತರೆ ಏನು ಮಾಡುವುದು ಎಂದು ಎರಡೂ ಸಮುದಾಯದ ಕೆಲವು ಜನರು ಯೋಚಿಸುತ್ತಾ ತಮ್ಮ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ನಾವು ಕೂಡಾ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಎದುರು ನೋಡುತ್ತಿದ್ದೇವೆ. ಆದರೆ ಎರಡೂ ಸಮುದಾಯಗಳ ನಡುವೆ ಶಾಂತಿಯುತ ಪರಿಹಾರಕ್ಕೆ ಪ್ರಯತ್ನಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಎರಡೂ ಕಡೆಯ ಬಹಳಷ್ಟು ಜನರು ಇದಕ್ಕೆ ವಿರುದ್ಧವಾಗಿರುವುದರಿಂದ ಈ ವಿಷಯವನ್ನೇ ನಾನು ಕೈಬಿಡುತ್ತೇನೆ ಎಂದು ನದ್ವಿ ತಿಳಿಸಿದ್ದಾರೆ.

ಮಾರ್ಚ್ ಒಂದರಂದು ನಾನು ಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಬಗೆಹರಿಸುವ ನಮ್ಮ ಕ್ರಮವನ್ನು ಹಲವರು ವಿರೋಧಿಸುತ್ತಿದ್ದಾರೆ ಮತ್ತು ನನ್ನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಿಳಿಸಿದ್ದೆ. ಆಗ ತಮಗೂ ಕೂಡಾ ಇಂಥದ್ದೇ ಅನುಭವವಾಗಿರುವುದಾಗಿ ರವಿಶಂಕರ್ ತಿಳಿಸಿದ್ದರು ಎಂದು ನದ್ವಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News