ಮುಖಪುಟದಲ್ಲಿ ರೂಪದರ್ಶಿ ಮಗುವಿಗೆ ಹಾಲುಣಿಸುವ ಚಿತ್ರ : ಪತ್ರಿಕೆ ವಿರುದ್ಧ ದೂರು ದಾಖಲು

Update: 2018-03-02 17:12 GMT

ಹೊಸದಿಲ್ಲಿ, ಮಾ.2: ಕೇರಳದ ಪತ್ರಿಕೆ ‘ಗೃಹಲಕ್ಷ್ಮೀ’ಯ ಮುಖಪುಟದಲ್ಲಿ ಪ್ರಕಟವಾದ ರೂಪದರ್ಶಿಯೊಬ್ಬರು ಮಗುವಿಗೆ ಹಾಲುಣಿಸುವ ಫೋಟೋ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

 ಗಿಲು ಜೋಸೆಫ್ ಎಂಬ ರೂಪದರ್ಶಿ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಪ್ರಕಟವಾಗಿದ್ದು, ಇದರ ವಿರುದ್ಧ ವಿನೋದ್ ಮ್ಯಾಥ್ಯೂ ಎಂಬ ವಕೀಲರು ಕೊಲ್ಲಂನ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸಲು ಪ್ರೋತ್ಸಾಹ ನೀಡುವ ಆಂದೋಲನದ ಅಂಗವಾಗಿ ಪ್ರಕಟಿಸಲಾಗಿರುವ ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ಭಾರೀ ಚರ್ಚೆ ನಡೆದಿದೆ.

 ಆದರೆ ಇದರ ಬಗ್ಗೆ ತನಗೇನೂ ವಿಷಾದವಿಲ್ಲ ಎಂದು 27ರ ಹರೆಯದ ಗಿಲು ಜೋಸೆಫ್ ಹೇಳಿದ್ದಾರೆ. ನನಗೆ ಸತ್ಯ ಎಂದೆನಿಸಿದ ಕಾರ್ಯವನ್ನು ನಾನು ಮಾಡಿದ್ದೇನೆ. ಇದರಲ್ಲಿ ನಾನು ವಿಫಲಳಾದರೂ ನನಗೇನೂ ವಿಷಾದವಿಲ್ಲ ಎಂದವರು ಹೇಳಿದ್ದಾರೆ. ಮಹಿಳೆಯರು ಯಾವುದೇ ಭಯವಿಲ್ಲದೆ ಮುಕ್ತವಾಗಿ ಸ್ತನ್ಯಪಾನ ಮಾಡಿಸಬೇಕು . ಈ ಸಂದೇಶವನ್ನು ಲೇಖನದಲ್ಲಿ ಹಾಗೂ ಫೋಟೋದಲ್ಲಿ ನೀಡಿದ್ದೇನೆ. ಆದರೆ ಲೇಖನದಲ್ಲಿ ಬರೆದಿರುವುದನ್ನು ಓದದೆ ಕೆಲವರು ಟೀಕಿಸಲು ಆರಂಭಿಸಿದ್ದಾರೆ ಎಂದು ಗಿಲು ಜೋಸೆಫ್ ಹೇಳಿದ್ದಾರೆ.

 ಗಿಲು ಜೋಸೆಫ್ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಈ ಅಭಿಯಾನಕ್ಕೆ ರೂಪದರ್ಶಿಯ ಅಗತ್ಯವಿತ್ತೇ. ಗಿಲು ಜೋಸೆಫ್ ತನ್ನ ಸ್ವಂತ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿದ್ದರೆ ಇದಕ್ಕೊಂದು ಅರ್ಥವಿರುತ್ತಿತ್ತು ಎಂದು ಕೆಲವರು ಟೀಕಿಸಿದ್ದಾರೆ. ತಮ್ಮನ್ನು ಇತರರು ಗಮನಿಸುತ್ತಿದ್ದಾರೆ ಎಂಬ ಅಳುಕಿದ್ದರೂ ಮಾತೆಯರು ತಮ್ಮ ಮಗುವಿಗೆ ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುತ್ತಿಲ್ಲವೇ. ಈ ಕಾರ್ಯಕ್ಕೆ ಅಭಿಯಾನ ಬೇಕಿತ್ತೇ. ಅದೂ ರೂಪದರ್ಶಿಯೊಬ್ಬರು ತಮ್ಮ ದೇಹದ ಮೇಲ್ಭಾಗವನ್ನು ಪ್ರದರ್ಶಿಸುವ ಚಿತ್ರ ಬೇಕಿತ್ತೇ ಎಂಬ ಪ್ರಶ್ನೆಗಳ ಸರಮಾಲೆಯೇ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News