ಮಂಡ್ಯ: ನಾಲೆಗೆ ನೀರು ಹರಿಸಲು ಒತ್ತಾಯಿಸಿ ರೈತಸಂಘದಿಂದ ಧರಣಿ

Update: 2018-03-02 18:21 GMT

ಮಂಡ್ಯ, ಮಾ.2: ವಿ.ಸಿ.ನಾಲೆಯಲ್ಲಿ ನೀರುಹರಿಸಿ ಬೆಳೆಗಳನ್ನು ರಕ್ಷಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಶುಕ್ರವಾರ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು, ಸರಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಬೇಸಗೆ ಬೆಳೆಗೆ ನೀರು ಹರಿಸಲಾಗುತ್ತಿದೆಯಾದರೂ, ಸಮರ್ಪಕವಾಗಿ ಹರಿಸಲಾಗುತ್ತಿಲ್ಲ. ಮುಂಗಾರು ಬೆಳೆ ಕಳೆದುಕೊಂಡು ಬೇಸಿಗೆ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಇಲಾಖೆಯ ಧೋರಣೆಯಿಂದ ಕಂಗಾಲಾಗಿದ್ದಾರೆ ಎಂದು ಅವರು ಕಿಡಿಕಾರಿದರು.

ಕೆಆರ್ ಎಸ್ ಜಲಾಶಯದಲ್ಲಿ ನೀರಿದ್ದರೂ ಸರಿಯಾಗಿ ಹರಿಸಲಾಗುತ್ತಿಲ್ಲ. ಕೆಲವರು ಭತ್ತ ನಾಟಿಗೆ ತಯಾರಾಗಿದ್ದರೆ, ಮತ್ತೆ ಹಲವರು ಭತ್ತ ನಾಟಿ ಮಾಡಿದ್ದಾರೆ. ಈಗ ನೀರಿಲ್ಲದೆ ಒಣಗಿ ಹೋಗುತ್ತಿವೆ ಎಂದು ಅವರು ಅವಲತ್ತುಕೊಂಡರು.

ಕೂಡಲೇ ನಾಲೆಯಲ್ಲಿ ನೀರು ಹರಿಸಬೇಕು. ನಾಲೆಯಲ್ಲಿ 20 ದಿನ ನೀರು ಹರಿಸಿ 10 ದಿನ ನಿಲ್ಲಿಸಬೇಕು. ನಾಳೆಯಿಂದಲೇ ನೀರು ಹರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಕೋಶಾಧ್ಯಕ್ಷ ಜಿ.ಎಸ್.ಲಿಂಗಪ್ಪಾಜಿ, ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಬಿ.ಜೆ.ರಮೇಶ್, ಪಿ.ಕೆ.ನಾಗಣ್ಣ, ಇಂಡುವಾಳು ಸಿದ್ದೇಗೌಡ, ಲತಾ ಶಂಕರ್, ಜಿ.ಎ.ಶಂಕರ್, ಕುಂಟನಹಳ್ಳಿ ಮರಲಿಂಗ, ಹುರುಗಲವಾಡಿ ಉಮೇಶ, ದೇಶಹಳ್ಳಿ ರವಿಕುಮಾರ್, ಇತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News