ಪ್ರಸಾರ ಸಚಿವಾಲಯ- ಪ್ರಸಾರ ಭಾರತಿ ನಡುವೆ ಮುಸುಕಿನ ಗುದ್ದಾಟ

Update: 2018-03-03 04:01 GMT

ಹೊಸದಿಲ್ಲಿ, ಮಾ.3: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಪ್ರಸಾರ ಭಾರತಿ ನಡುವಿನ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎರಡು ಸಂಸ್ಥೆಗಳ ನಡುವಿನ ಜಗಳ ಬೀದಿಗೆ ಬಂದಿದೆ. ಪ್ರಸಾರ ಭಾರತಿಗಾಗಿ ಮೀಸಲಿಟ್ಟ ಹಣವನ್ನು ಬಿಡುಗಡೆ ಮಾಡದೇ ಸಚಿವಾಲಯ ಹಿಡಿದಿಟ್ಟುಕೊಂಡಿದೆ ಎಂಬ ಆರೋಪ ದುರುದ್ದೇಶಪೂರ್ವಕ ಹಾಗೂ ತಪ್ಪು ಮಾಹಿತಿ ಎಂದು ಸಚಿವಾಲಯ ಪ್ರತಿಪಾದಿಸಿದೆ.

ಈ ಮಧ್ಯೆ ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕವರೇಜ್‌ಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಯೋಜಿಸಿದ ಖಾಸಗಿ ಕಂಪೆನಿಗೆ ಹಣ ನೀಡಲು ಪ್ರಸಾರ ಭಾರತಿ ನಿರಾಕರಿಸಿದೆ.

 "ಪದೇ ಪದೇ ನೆನಪೋಲೆಗಳನ್ನು ಕಳುಹಿಸಿದರೂ ಪ್ರಸಾರ ಭಾರತಿ ಒಡಂಬಡಿಕೆ ಮಾಡಿಕೊಳ್ಳದ ಕಾರಣ ಅನುದಾನ ತಡೆಹಿಡಿಯಲಾಗಿದೆ. ಸಾಮಾನ್ಯ ಹಣಕಾಸು ನಿಯಮಾವಳಿ ಪ್ರಕಾರ, ಯಾವುದೇ ಸ್ವಾಯತ್ತ ಸಂಸ್ಥೆ ಅನುದಾನ ಪಡೆಯಬೇಕಿದ್ದರೆ ಸಚಿವಾಲಯದ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡುವುದು ಕಡ್ಡಾಯ. ಈ ಒಡಂಬಡಿಕೆ ಪತ್ರದಲ್ಲಿ ಭೌತಿಕ ಮತ್ತು ಹಣಕಾಸು ಗುರಿ, ಆಯಾ ಹಣಕಾಸು ವರ್ಷದಲ್ಲಿ ಅನುದಾನ ವೆಚ್ಚ ಮಾಡುವ ಚಟುವಟಿಕೆಯ ವೇಳಾಪಟ್ಟಿ ಮತ್ತಿತರ ವಿವರಗಳನ್ನು ನೀಡಬೇಕು. ಈ ಬಗ್ಗೆ ಪದೇಪದೆ ಸುತ್ತೋಲೆಗಳನ್ನು ಕಳುಹಿಸಿದರೂ ಪ್ರಸಾರ ಭಾರತಿ ಒಡಂಬಡಿಕೆ ಮಾಡಿಕೊಂಡಿಲ್ಲ" ಎಂದು ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಆದರೆ ಪ್ರಸಾರ ಭಾರತಿ ಮುಖ್ಯಸ್ಥ ಸೂರ್ಯಪ್ರಕಾಶ್ ಅವರ ಪ್ರಕಾರ, ಸಚಿವಾಲಯದಿಂದ ಹಣ ಬಿಡುಗಡೆಯಾಗದ ಕಾರಣ ಸಿಬ್ಬಂದಿಗೆ ಜನವರಿ ಹಾಗೂ ಫೆಬ್ರವರಿ ತಿಂಗಳ ವೇತನವನ್ನು ತುರ್ತು ಆಕಸ್ಮಿಕ ನಿಧಿಯಿಂದ ಪಾವತಿಸಬೇಕಾಗಿದೆ. ಎಪ್ರಿಲ್ ವೇಳೆಗೆ ಇದು ಕೂಡಾ ಮುಗಿಯಲಿದೆ"

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕವರೇಜ್‌ಗಾಗಿ ಸಚಿವಾಲಯ ಆಯ್ಕೆ ಮಾಡಿದ ಖಾಸಗಿ ಕಂಪೆನಿಗೆ 2.92 ಕೋಟಿ ರೂಪಾಯಿ ಪಾವತಿಸಲು ಪ್ರಸಾರ ಭಾರತಿ ನಿರಾಕರಿಸಿರುವುದು ಸಮಸ್ಯೆಯ ಮೂಲ. ದೂರದರ್ಶನದಲ್ಲಿ ಸಾಕಷ್ಟು ನೈಪುಣ್ಯ ಹಾಗೂ ಶ್ರಮಶಕ್ತಿ ಇರುವುದರಿಂದ ಕವರೇಜ್ ಹೊಣೆಯನ್ನು ಖಾಸಗಿ ಕಂಪೆನಿಗಳಿಗೆ ವಹಿಸುವುದು ಅನಗತ್ಯ ಎನ್ನುವುದು ಪ್ರಸಾರ ಭಾರತಿ ವಾದ.

ಪ್ರಸಾರ ಭಾರತಿಗೆ 2018-19ನೇ ಸಾಲಿಗೆ 2,800 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದ್ದು, ಸಚಿವಾಲಯದ ಮೂಲಕ ಇದು ಬಿಡುಗಡೆಯಾಗುತ್ತದೆ. ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಪ್ರಸಾರ ಭಾರತಿಯಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News