ಹಿಮಾಂತ ಬಿಸ್ವ ಸರ್ಮಾ: ಮಾಜಿ ಕಾಂಗ್ರೆಸಿಗ, ಹಾಲಿ ಬಿಜೆಪಿಯ ‘ಹಿಟ್‌ಮ್ಯಾನ್’

Update: 2018-03-03 15:11 GMT

ಹೊಸದಿಲ್ಲಿ, ಮಾ.3: ಭಾರತದ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯ ಸಾಧಿಸಿದೆ. ತ್ರಿಪುರದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ಆಳ್ವಿಕೆಯನ್ನು ಅಂತ್ಯಗೊಳಿಸಿದ್ದರೆ ನಾಗಾಲ್ಯಾಂಡ್‌ನಲ್ಲೂ ಮಿತ್ರಪಕ್ಷದೊಂದಿಗೆ ಸೇರಿ ಸರಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ಆದರೆ ಕೇಸರಿ ಪಡೆಯ ಅಭೂತಪೂರ್ವ ಪ್ರದರ್ಶನದ ಹಿಂದಿರುವುದು ಓರ್ವ ಮಾಜಿ ಕಾಂಗ್ರೆಸಿಗನ ಸಂಘಟನಾ ಚತುರತೆ, ಅವರೇ ಹಿಮಾಂತ ಬಿಸ್ವ ಸರ್ಮಾ.

ಇಡೀ ಈಶಾನ್ಯ ಭಾರತದ ಜನರ ನರನಾಡಿಯನ್ನು ಬಲ್ಲವರಾಗಿರುವ ಬಿಸ್ವ ತ್ರಿಪುರದಲ್ಲಿ ಅಸ್ಸಾಂ ಶೈಲಿಯ ಮೈತ್ರಿಯನ್ನು ನಡೆಸಿ ಸ್ಥಳೀಯ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿ ಮತಗಳು ಬಿಜೆಪಿಯ ತೆಕ್ಕೆಗೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿಗೆ ರಹದಾರಿ ಒದಗಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಬಿಸ್ವ ಕೇವಲ ಮೂರು ವರ್ಷಗಳಲ್ಲಿ ಯಾರಿಂದಲೂ ಮಾಡಲಸಾಧ್ಯವಾದ ಕಾರ್ಯವನ್ನು ಮಾಡಿ ತೊರಿಸಿದ್ದಾರೆ. ಐದು ವರ್ಷಗಳ ಹಿಂದೆ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲಾಗದ ಬಿಜೆಪಿ ಈ ಬಾರಿ ಶೇ. 41 ಮತಗಳನ್ನು ಪಡೆದು ಸರಕಾರ ರಚಿಸಲು ಮುಂದಾಗಿದೆ ಎಂದಾದರೆ ಅದಕ್ಕೆ ಕಾರಣ ಕೇವಲ ಹಿಮಾಂತ ಬಿಸ್ವ ಸರ್ಮಾ.

2010ರಲ್ಲಿ ಯುಪಿಎ ಮತ್ತೆ ಅಧಿಕಾರಕ್ಕೆ ಮರಳಿತ್ತು. ಸಾಧ್ಯವಾದಷ್ಟು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಬಯಸಿತ್ತು. ಅಸ್ಸಾಂನಲ್ಲಿ ಎರಡು ಸ್ಥಾನಗಳಿದ್ದರೂ ಬಹುಮತ ಇರಲಿಲ್ಲ. ಆ ಸಮಯದಲ್ಲಿ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಬಹಳ ಪ್ರಭಾವಿ ವ್ಯಕ್ತಿಯಾಗಿದ್ದರು. ಅವರು ಕೂಡಲೇ ಫೋನಾಯಿಸಿದ್ದು ಇದೇ ಬಿಸ್ವಗೆ. ನಿಗದಿತ ದಿನದಂದು ನಾಲ್ಕು ಬಿಜೆಪಿ ಶಾಸಕರು ಬಿಸ್ವ ಚಲಾಯಿಸುತ್ತಿದ್ದ ಕಾರಿನಲ್ಲಿ ವಿಧಾನಸಭಾ ಸಂಕೀರ್ಣದ ಒಳಗೆ ಪ್ರವೇಶಿಸಿದಾಗಲೇ ವಿರೋಧ ಪಕ್ಷವಾದ ಬಿಜೆಪಿಗೆ ಮುಂದೆ ಏನು ನಡೆಯಲಿದೆ ಎಂಬುದರ ಅರಿವಾಗಿತ್ತು. ಕಾಂಗ್ರೆಸ್‌ನ ನಾಝ್ನೀನ್ ಫಾರೂಕಿ ಮತ್ತು ಸಿಲ್ವಿಯಸ್ ಕೊಂಡ್ಪನ್ ಕ್ರಮವಾಗಿ 43 ಮತ್ತು 42 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದರು. ಈ ಬೆಳವಣಿಗೆಯ ನಂತರ ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್, ಪ್ರಧಾನಿ ಮನ್‌ಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಅಸ್ಸಾಂನಲ್ಲಿ ಇಂದು ಕಾಂಗ್ರೆಸ್ ಪಕ್ಷ, ಅದರ ನಾಯಕರು, ಮುಖ್ಯಮಂತ್ರಿ ಮತ್ತು ಮಂತ್ರಿಗಳಿಂದ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಆರೋಪಿಸಿದ್ದರು. ಅಂದು ಆ ವ್ಯೂಹ ರಚಿಸಿದ್ದ ಬಿಸ್ವ ಒಂದು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಪ್ರಬಲ ಅಸ್ತ್ರವಾಗಿ ಬದಲಾಗಿದ್ದಾರೆ.

ಆರನೇ ತರಗತಿಯಲ್ಲಿರುವಾಗಲೇ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಸೇರಿದ ಬಿಸ್ವಗೆ ಆ ಕಾಲದಲ್ಲಿ ಪ್ರೆಸ್‌ಗಳಿಗೆ ಸಂಘಟನೆಯ ಪತ್ರಿಕಾ ಪ್ರಕಟನೆ ಹಾಗೂ ಇತರ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ವಹಿಸಲಾಗಿತ್ತು. ಬಾಲ್ಯದಲ್ಲೇ ಮಾಧ್ಯಮದ ಜೊತೆ ಸಂಪರ್ಕ ಪಡೆದುಕೊಂಡ ಕಾರಣವೋ ಎಂಬಂತೆ ಮುಂದೆ ಬಿಸ್ವ ಅಸ್ಸಾಂನ ಬಹುದೊಡ್ಡ ಸುದ್ದಿ ಮಾಧ್ಯಮ ‘ನ್ಯೂಸ್‌ಲೈವ್’ ಸೇರಿದಂತೆ ಟಿವಿ ಜಾಲದ ಮಾಲಕರಾಗಿ ಬೆಳೆದರು. ಅವರಿಗೆ ಉಲ್ಫಾ ಉಗ್ರರ ಜೊತೆ ಸಂಪರ್ಕವಿತ್ತು ಎಂಬ ಆರೋಪಗಳೂ ಕೇಳಿಬಂದಿವೆ. ಆದರೆ ಬಿಸ್ವ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ನಂತರ ಅಸ್ಸಾಂನ ಅಂದಿನ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಸಂಪರ್ಕಕ್ಕೆ ಬಂದ ಹಿಮಾಂತ ಅವರ ಯೋಚನಾಲಹರಿಯೇ ಬದಲಾಯಿತು. ಅವರೇ ಹೇಳುವಂತೆ ಕಾಂಗ್ರೆಸ್ ಸಂಪರ್ಕಕ್ಕೆ ಬಂದ ನಂತರ ಅವರು ಓರ್ವ ಅಸ್ಸಾಮಿಯಾಗಿ ಯೋಚಿಸುವುದನ್ನು ಬಿಟ್ಟು ಭಾರತೀಯನಾಗಿ ಯೋಚಿಸಲು ಆರಂಭಿಸಿದರು. 1993ರಲ್ಲಿ ಕಾಂಗ್ರೆಸ್ ಸೇರಿದ ಬಿಸ್ವ 2006ರ ವೇಳೆಗೆ ಮುಖ್ಯಮಂತ್ರಿ ತರುಣ್ ಗೊಗೊಯಿಯ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು.

ಆದರೆ ಪಕ್ಷದಲ್ಲಿ ಹಿಮಾಂತರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಪ್ರಭಾವ ಗೊಗೊಯಿಗೆ ಪಥ್ಯವಾಗಲಿಲ್ಲ. ಹಿಮಾಂತರನ್ನು ತಡೆಯದಿದ್ದರೆ ತನ್ನ ಕುರ್ಚಿಗೆ ಆಪತ್ತು ತಪ್ಪಿದ್ದಲ್ಲ ಎಂದು ಯೋಚಿಸಿದ ಗೊಗೊಯಿ ಹಲವು ಕಾರ್ಯಕ್ರಮಗಳಲ್ಲಿ ಹಿಮಾಂತರನ್ನು ಪರೋಕ್ಷವಾಗಿ ಟೀಕಿಸಲು ಆರಂಭಿಸಿದರು. ಹಿಮಾಂತ ಕೂಡಾ ಗೊಗೊಯಿ ವಿರುದ್ಧ ಮಾತನಾಡಲು ಆರಂಭಿಸಿದರು.

ಅಂತಿಮ ಸಮಾಲೋಚನೆ:

ಇಬ್ಬರು ನಾಯಕರ ಮಧ್ಯೆ ಉಂಟಾಗಿರುವ ಭಿನ್ನಮತವನ್ನು ಶಮನ ಮಾಡುವ ಉದ್ದೇಶದಿಂದ ರಾಹುಲ್ ಗಾಂಧಿಯವರ ನಿವಾಸದಲ್ಲಿ ಸಭೆಯನ್ನು ಕರೆಯಲಾಯಿತು. ಈ ಸಭೆಯಲ್ಲಿ ಕೇಂದ್ರದ ಎಲ್ಲ ನಾಯಕರು, ಎಪಿಸಿಸಿ ಅಧ್ಯಕ್ಷ ಅಂಜನಾ ದತ್ತಾ ಜೊತೆಗೆ ತರುಣ್ ಗೊಗೊಯಿ ಹಾಗೂ ಹಿಮಾಂತ ಪಾಲ್ಗೊಂಡಿದ್ದರು. ಆದರೆ ಈ ಸಭೆಯಲ್ಲಿ ಏನು ಎಡವಟ್ಟಾಗರಬಾರದಿತ್ತೋ ಅದೇ ಆಗಿ ಹೋಯಿತು. ಪರಿಣಾಮವಾಗಿ ಹಿಮಾಂತ ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರವನ್ನು ತೆಗೆದುಕೊಂಡರು.

ತನ್ನ ಶ್ರಮದಿಂದ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದರೂ ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಸಿದ್ದಾಂತವೇ ಕಾರಣ ಎಂದು ಹೇಳುವ ಬಿಸ್ವ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ರಾಜ್ಯಗಳ 24 ಸ್ಥಾನಗಳಲ್ಲಿ ಕನಿಷ್ಟ 19ರಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವ ಭರವಸೆ ನೀಡಿದ್ದಾರೆ.

ಹಿರಿಯ ಪತ್ರಕರ್ತರೊಬ್ಬರಲ್ಲಿ ಅಂದಿನ ಸಭೆಯ ಬಗ್ಗೆ ಪ್ರಸ್ತಾಪಿಸಿದಾಗ ಹಿಮಾಂತ ಹೀಗೆನ್ನುತ್ತಾರೆ, ಅಂದು ರಾಹುಲ್ ಗಾಂಧಿ ಸಭೆ ನಡೆಸುತ್ತಿರಲಿಲ್ಲ. ಅವರು ತಮ್ಮ ಮುದ್ದಿನ ನಾಯಿ ಜೊತೆ ಆಡುವಲ್ಲಿ ವ್ಯಸ್ತವಾಗಿದ್ದರು. “ನಿಮಗೆ ನಿಮ್ಮ ನಾಯಿ ಜೊತೆ ಬಹಳ ಪ್ರೀತಿಯಿರಬಹುದು. ಆದರೆ ಮುಖ್ಯಮಂತ್ರಿ ಜೊತೆ ಸಭೆ ನಡೆಸುವಾಗ ನೀವು ನಿಮ್ಮ ನಾಯಿಯನ್ನು ತರುವಂತಿಲ್ಲ. ಆ ನಾಯಿ ನಮ್ಮ ಟೇಬಲ್ ಮೇಲೆ ಇಟ್ಟಿದ್ದ ಬಿಸ್ಕತ್ತನ್ನು ಕೂಡಾ ತಿನ್ನುತ್ತಿತ್ತು. ಹಾಗಾಗಿ ಸಭೆಯಿಂದ ಹೊರನಡೆಯುವ ಸಮಯದಲ್ಲಿ ನಾನು ಗೊಗೊಯಿ ಅವರಲ್ಲಿ ಹೇಳಿದೆ, ನಾನು ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದೇನೆ. ಇದೊಂದು ಗಂಭೀರ ವಿಷಯ. ಮನೆಗೆ ಆಹ್ವಾನಿಸಿದ ಜನರ ಜೊತೆ ನೀವು ಹೀಗೆ ವರ್ತಿಸುವಂತಿಲ್ಲ”.

“ನನಗೆ ರಾಹುಲ್ ಗಾಂಧಿಯವರಿಗೆ ನಾಯಿಯ ಮೇಲಿದ್ದ್ದ ಪ್ರೀತಿಯ ಬಗ್ಗೆ ಆಕ್ಷೇಪವಿಲ್ಲ. ಆದರೆ ಪಕ್ಷದ ಅಸ್ಸಾಂ ವಿಭಾಗದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಕರೆದಿರುವ ಸಭೆಯಲ್ಲಿ ಅವರು ಗಂಭೀರವಾಗಿ ವರ್ತಿಸದಿರುವುದು ನನಗೆ ಬೇಸರ ತಂದಿತು” ಎಂದು ಹಿಮಾಂತ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News