ಐಟಿ ಕ್ಷೇತ್ರದಲ್ಲೂ ಹಗರಣ: ಸಿಬಿಐಯಿಂದ ಎಫ್‌ಐಆರ್

Update: 2018-03-03 15:51 GMT

ಬೆಂಗಳೂರು, ಮಾ.3: ಇನ್ಫೋಸಿಸ್‌ನ ಕೆಲ ಉದ್ಯೋಗಿಗಳು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತೋರ್ವ ನಕಲಿ ಚಾರ್ಟರ್ಡ್ ಅಕೌಂಟೆಂಟ್ ಸೇರಿ ಕೋಟ್ಯಂತರ ರೂ. ಪರಿಷ್ಕೃತ ಆದಾಯ ತೆರಿಗೆ ವಂಚನೆ ನಡೆಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಕೆಲವು ಪ್ರತಿಷ್ಠಿತ ಐಟಿ ಸಂಸ್ಥೆಗಳ ಉದ್ಯೋಗಿಗಳ ಲಾಭಕ್ಕಾಗಿ ನಡೆಸಿರುವ ಈ ಹಗರಣವನ್ನು ಆದಾಯ ತೆರಿಗೆ ಇಲಾಖೆಯು ಬಯಲು ಮಾಡಿದ್ದು, ಜನವರಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಆದಾಯ ತೆರಿಗೆ ಅಧಿಕಾರಿಗಳು ಮತ್ತು ಇನ್ಫೋಸಿಸ್‌ನ ಸಿಬ್ಬಂದಿ, ಸದ್ಯ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಿಂದ ನಿಷೇಧಕ್ಕೊಳಗಾಗಿರುವ ನಕಲಿ ಸಿಎ ಜೊತೆ ಸೇರಿ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ 250 ತೆರಿಗೆ ಪಾವತಿದಾರರ ನಕಲಿ ದಾಖಲೆಗಳ ಸಹಾಯದಿಂದ ಮೂರು ವರ್ಷಗಳ 1,010 ಪರಿಷ್ಕೃತ ಆದಾಯ ತೆರಿಗೆಯನ್ನು ದಾಖಲಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಈ ಪರಿಷ್ಕೃತ ತೆರಿಗೆಗಳ ಆಧಾರದಲ್ಲಿ ಅಕ್ರಮವಾಗಿ ಮರುಪಾವತಿಗೆ ಮನವಿ ಮಾಡಲಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ.

ಇನ್ಫೋಸಿಸ್ ಆದಾಯ ತೆರಿಗೆ ಇಲಾಖೆಗೆ ಇ ರಿಟರ್ನ್ಸ್ ಸಾಫ್ಟ್‌ವೇರ್ ಪೂರೈಕೆ ಮಾಡುತ್ತದೆ. ನಕಲಿ ಸಿಎ, ನಾಗೇಶ್ ಶಾಸ್ತ್ರಿ ಆದಾಯ ತೆರಿಗೆಯನ್ನು ದಾಖಲಿಸಿ ಇನ್ಫೋಸಿಸ್ ಸಿಬ್ಬಂದಿಯ ಮೂಲಕ ಅಗತ್ಯವಿರುವ ಅನುಮತಿಯನ್ನು ಪಡೆಯುತ್ತಿದ್ದ. ಇದು ಐಟಿ ಕ್ಷೇತ್ರದಲ್ಲಿ ದೊಡ್ಡ ಹಗರಣವು ಸೃಷ್ಟಿಯಾಗುತ್ತಿರುವುದರ ಸೂಚನೆಯಾಗಿದೆ ಎಂದು ವರದಿ ತಿಳಿಸಿದೆ.

ಎಸ್‌ಎಸ್‌ಕೆ ಅಸೋಸಿಯೇಟ್ಸ್ ಸಂಸ್ಥೆಯ ಜೊತೆಗಾರನಾಗಿರುವ ಶಾಸ್ತ್ರಿ ಆದಾಯ ತೆರಿಗೆ ಇಲಾಖೆಯ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ (ಸಿಪಿಸಿ)ನ ಸಿಬ್ಬಂದಿಯ ಸಹಾಯದೊಂದಿಗೆ ತೆರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಇತರರೊಂದಿಗೆ ಸೇರಿ ನಕಲಿ ಆದಾಯ ತೆರಿಗೆಯನ್ನು ದಾಖಲಿಸಿ ಐದು ಕೋಟಿ ರೂ. ಮರುಪಾವತಿ ಪಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಖಾಸಗಿ ಕ್ಷೇತ್ರದ ಉದ್ಯೋಗಿಗಳ ಆದಾಯ ತೆರಿಗೆಯನ್ನು ದಾಖಲಿಸುತ್ತಿರುವ ಶಾಸ್ತ್ರಿಗೆ ಅವರ ಯೂಸರ್ ಐಡೆಂಟಿಫಿಕೇಶನ್ ಮತ್ತು ಪಾಸ್‌ವರ್ಡ್ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು. ಹಾಗಾಗಿ ಆರೋಪಿಯು, ವಾಸ್ತವದಲ್ಲಿ ಆದಾಯ ತೆರಿಗೆ ಪಾವತಿಸಿರುವ ಉದ್ಯೋಗಿಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರುಪಾವತಿಗೆ ಬೇಡಿಕೆಯಿಡುತ್ತಿದ್ದ. ಇಂಥ ಪರಿಷ್ಕೃತ ಆದಾಯ ತೆರಿಗೆ ದಾಖಲೆಗಳಲ್ಲಿ ಹೆಚ್ಚಿನವುಗಳಲ್ಲಿ ಗೃಹಸಾಲ ಪಾವತಿ ಮಾಡಿಲಿದೆ ಎಂಬ ಕಾರಣವನ್ನೇ ನೀಡಲಾಗುತ್ತಿತ್ತು ಎಂಬುದನ್ನು ಸಿಬಿಐ ಬೆಟ್ಟು ಮಾಡಿದೆ. ಹೀಗೆ ವಂಚನೆಯಿಂದ ಪಡೆದ ಹಣವನ್ನು ಶಾಸ್ತ್ರಿ ತನಗೆ ಸಹಾಯ ಮಾಡಿದ ತೆರಿಗೆ ಹಾಗೂ ಐಟಿ ಸಿಬ್ಬಂದಿ ಜೊತೆ ಹಂಚಿಕೊಳ್ಳುತ್ತಿದ್ದ ಎಂದು ಸಿಬಿಐ ಆರೋಪಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News