ರಾಷ್ಟ್ರದ ಅಭಿವೃದ್ದಿ ನಮ್ಮೆಲ್ಲರ ಕರ್ತವ್ಯ: ಎಸ್.ಪಿ.ಮುದ್ದಹನುಮೇಗೌಡ

Update: 2018-03-03 18:03 GMT

ತುಮಕೂರು,ಮಾ.03: ರಾಷ್ಟ್ರದ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಿದ್ದು, ಅದರ ಜವಬ್ದಾರಿಯನ್ನು ಪ್ರತಿಯೊಬ್ಬರು ಅರಿತುಕೊಳ್ಳ ಬೇಕಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ನಗರದ ಹೇಮಾವತಿ ಚನಾಲ್ ಕಚೇರಿಯ ಡಾ.ಸರ್.ಎಂ.ವಿಶ್ವೇಶ್ವರಯ್ಯ ಮೆಮೊರಿಯಲ್ ಹಾಲ್‍ನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ನೂತನ ಮಲ್ಟಿ ಸ್ಕಿಲ್ ಡೆವಲಪ್‍ಮೆಂಟ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ ನೆರವೇರಿಸಿ ಮಾತನಾಡುತಿದ್ದ ಅವರು, ಇಂದಿನ ಯುವಕರು ರಾಷ್ಟ್ರೀಯ ಮನೋಭಾವನೆ ಬೆಳೆಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕಿದೆ ಎಂದರು. 

ಇಂದಿನ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಅದರಲ್ಲಿ ಸ್ಕಿಲ್ ಡೆವಲಪ್‍ಮೆಂಟ್‍ಗೆ ಹೆಚ್ಚು ಪ್ರಧಾನ್ಯತೆ ನೀಡಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ಇದನ್ನು ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕಿದೆ. ತುಮಕೂರು ನಗರವು ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ 3 ವರ್ಷಗಳಲ್ಲಿ ನಗರದ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಠಿಯಾಗಿ ಯುವ ಜನತೆಗೆ ಉಜ್ವಲ ಭವಿಷ್ಯ ರೂಪಿಸುವಂತಾಗುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೆಗೌಡ ತಿಳಿಸಿದರು. 

ಚಿತ್ರದುರ್ಗ ಜಿಲ್ಲೆಯ ಸಂಸದ ಚಂದ್ರಪ್ಪ ಮಾತನಾಡಿ, ಭಾರತ ದೇಶದಲ್ಲಿ ಇಂದು ಶೇ.60 ರಷ್ಟು ಯುವ ಜನತೆಯಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ದೇಶದ ಗೌರವವನ್ನು ಕಾಪಾಡುವ ಜವಬ್ದಾರಿ ಯುವಜನತೆಗಿದ್ದು, ಕೇಂದ್ರ ಸರಕಾರದ ಯೋಜನೆಗಳನ್ನು ಉಪಯೋಗಿಸಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀಧೀರಾನಂದಜಿ ಮಹಾರಾಜ್ ಸ್ವಾಮೀಜಿ  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷತೆ ಲತಾ ರವಿಕುಮಾರ್, ಕಾರ್ಪೋರೇಟ್ ರುದ್ರೇಶ್, ಜಿಲ್ಲಾ ಎಂಪ್‍ಲಾಯ್‍ಮೆಂಟ್ ಅಧಿಕಾರಿ ವಿವೇಕಾನಂದ ಗಲಗಲಿ, ಎಸ್‍ವಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News