ಪರೀಕ್ಷೆ ಮುನ್ನಾದಿನ ಎದೆನೋವಿನಿಂದ ಮೃತಪಟ್ಟ ಎಸೆಸೆಲ್ಸಿ ವಿದ್ಯಾರ್ಥಿ

Update: 2018-03-04 12:11 GMT

ಮುಂಬೈ, ಮಾ.4: ಹತ್ತನೆ ತರಗತಿ ವಿದ್ಯಾರ್ಥಿ ಪರೀಕ್ಷೆಯ ಮುಂಚಿನ ದಿವಸ ಎದೆನೋವಿನಿಂದ ಮೃತಪಟ್ಟಿದ್ದಾನೆ. ಮುಂಬೈಯ ಪ್ರಭಾದೇವಿಯಲ್ಲಿ  ಘಟನೆ ನಡೆದಿದ್ದು, ಮೃತಪಟ್ಟ ಋತ್ವಿಕ್ ಖಡ್ಸೆ ದಾದರ್‍ನ ಶಿಶುವಿಹಾರ್ ಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ .ಬುಧವಾರ ಶಾಲೆಯಲ್ಲಿ ನಡೆದಿದ್ದ ಹೋಲಿ ಆಚರಣೆಯಲ್ಲಿ ಭಾಗವಹಿಸಿ ಬಂದಿದ್ದ  ವಿದ್ಯಾರ್ಥಿ ಮಧ್ಯ ರಾತ್ರಿ ವೇಳೆ ಮೃತಪಟ್ಟಿದ್ದಾನೆ.

ಪರೀಕ್ಷೆಗೆ ಓದಲು ಬೆಳಗ್ಗೆ ಐದೂವರೆಗಂಟೆಗೆ ತನ್ನನ್ನು ಕರೆಯಬೇಕೆಂದು ಹೆತ್ತವರಿಗೆ ಋತ್ವಿಕ್ ಹೇಳಿ ಮಲಗಿದ್ದಾನೆ. ನಂತರ ಮಧ್ಯ ರಾತ್ರಿ ಅವನಿಗೆ ಎದೆನೋವು ಕಾಣಿಸಿಕೊಂಡಿದೆ.  ಎದೆ ನೋವಾಗುತ್ತಿದೆ ಎಂದು  ಹೆತ್ತವರಿಗೆ ಹೇಳಿದ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದ ಬಾಲಕನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಆತ ಬದುಕುಳಿಯಲಿಲ್ಲ.

ಆಸ್ಪತ್ರೆಗೆ ರಾತ್ರಿ ಎರಡುಗಂಟೆಗೆ ಬಾಲಕನ್ನು ಕರೆತರಲಾಗಿದೆ ಎಂದು ಬಾಲಕನನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಅಷ್ಟರಲ್ಲಿ ಆತ ಮೃತನಾಗಿದ್ದ. ಮೃತ ಸ್ಥಿತಿಯಲ್ಲಿ ಆತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಪೋಸ್ಟ್‍ಮಾರ್ಟಂ ನಡೆಸಲಾಗಿದೆ. ಆದರೆ  ಪ್ರಾಥಮಿಕ ಪರೀಕ್ಷೆಯಲ್ಲಿ ಬಾಲಕನ ನಿಧನದ ಕಾರಣ ಗೊತ್ತಾಗಿಲ್ಲ.  ಹೃದಯಾಘಾತ ಆಗಿರಬಹುದು ಎಂದು ಫಾರೆನ್ಸಿಕ್ ಸರ್ಜನ್‍ಗಳು ತಿಳಿಸಿದ್ದಾರೆ. ಪರೀಕ್ಷೆಯ ವರದಿ ಸಿಕ್ಕಿದ ಬಳಿಕವೇ ಸರಿಯಾದ ಕಾರಣವನ್ನು ಗುರುತಿಸಬಹುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News