ರಾಷ್ಟ್ರಪತಿ, ಉಪರಾಷ್ಟ್ರಪತಿ ವಾಹನಗಳಲ್ಲಿ ಇನ್ನು ಈ ಬದಲಾವಣೆ…

Update: 2018-03-04 14:56 GMT

ಹೊಸದಿಲ್ಲಿ, ಮಾ.4: ದೇಶದ ಅಗ್ರ ಸಾಂವಿಧಾನಿಕ ಅಧಿಕಾರಿಗಳಾದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳ ವಾಹನಗಳೂ ನೋಂದಣೆ ಸಂಖ್ಯೆಯನ್ನು ಪ್ರದರ್ಶಿಸುವ ನಂಬರ್‌ಪ್ಲೇಟ್ ಹೊಂದಲಿವೆ ಎಂದು ಸರಕಾರ ತಿಳಿಸಿದೆ.

ಈ ವಾಹನಗಳನ್ನು ನೋಂದಣೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

   ರಾಷ್ಟ್ರಪತಿ/ ಅವರ ಕಾರ್ಯದರ್ಶಿ , ಉಪ ರಾಷ್ಟ್ರಪತಿ/ ಅವರ ಕಾರ್ಯದರ್ಶಿ, ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು, ಅಥವಾ ಅವರ ಕಚೇರಿಯ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವಿದೇಶ ವ್ಯವಹಾರದ ಅಧಿಕಾರಿಗಳು ಬಳಸುವ ವಾಹನಗಳನ್ನು ನೋಂದಣೆ ಮಾಡಿಸಲು ಕ್ರಮ ಕೈಗೊಳ್ಳುವಂತೆ 2018ರ ಜನವರಿ 2ರಂದು ಪತ್ರ ಬರೆಯಲಾಗಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.

 ಪತ್ರಕ್ಕೆ ಉತ್ತರ ಬರೆದಿರುವ ವಿದೇಶ ವ್ಯವಹಾರ ಇಲಾಖೆ , ತಮ್ಮ ಬಳಿ 14 ವಾಹನಗಳಿದ್ದು ವಿದೇಶದ ಗಣ್ಯರು ಆಗಮಿಸುವಾಗ ಅವರ ಸಂಚಾರಕ್ಕೆ ಬಳಸಲಾಗುತ್ತಿದೆ. ಈ ವಾಹನಗಳ ನೋಂದಣೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದೆ. ಅಲ್ಲದೆ ಉಪರಾಷ್ಟ್ರಪತಿಗಳ ಸಚಿವಾಲಯ ಕಳಿಸಿರುವ ಉತ್ತರದಲ್ಲಿ , ಉಪರಾಷ್ಟ್ರಪತಿ, ಅವರ ಕುಟಂಬವರ್ಗ ಸಂಚರಿಸುವ ವಾಹನ ಸೇರಿದಂತೆ ಸಚಿವಾಲಯದಲ್ಲಿ ಬಳಕೆಯಾಗುವ ಎಲ್ಲಾ ವಾಹನಗಳು ನೋಂದಣೆ ಸಂಖ್ಯೆ ಹೊಂದಲಿವೆ ಎಂದು ತಿಳಿಸಲಾಗಿದೆ.

 ‘ನ್ಯಾಯಭೂಮಿ’ ಎಂಬ ಸರಕಾರೇತರ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಮೋಟಾರು ವಾಹನ ಕಾಯ್ದೆಯಡಿ ನೋಂದಣೆಯಾಗದ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜಭವನ, ವಿದೇಶ ವ್ಯವಹಾರ ಇಲಾಖೆಗೆ ಸೇರಿದ ವಾಹನಗಳನ್ನು ಮುಟ್ಟುಗೋಲು ಹಾಕುವಂತೆ ದಿಲ್ಲಿ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಬೇಕೆಂದು ಕೋರಿ ‘ನ್ಯಾಯಭೂಮಿ’ಯ ಕಾರ್ಯದರ್ಶಿ ರಾಕೇಶ್ ಅಗರ್ವಾಲ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News