​ಪಿಎನ್‌ಬಿ ಹಗರಣ: ವ್ಯಾಪಾರ ಸಾಲದ ಮೇಲೆ ಹೊಡೆತ

Update: 2018-03-04 15:46 GMT

ಮುಂಬೈ, ಮಾ.4: 12,600 ಕೋಟಿ ರೂ. ಮೊತ್ತದ ಪಿಎನ್‌ಬಿ ಹಗರಣದಿಂದಾಗಿ ಬ್ಯಾಂಕ್‌ಗಳು ಸಾಲ ನೀಡಲು ಮತ್ತು ಒಪ್ಪಿಗೆ ಪತ್ರ (ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್-ಎಲ್‌ಒಯು) ನೀಡಲು ಹಿಂಜರಿಯುತ್ತಿರುವ ಕಾರಣ ವ್ಯಾಪಾರ ಸಾಲ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿರುವುದಾಗಿ ಬ್ಯಾಂಕ್ ಮೂಲಗಳು ತಿಳಿಸಿವೆ.

ಯಾವ ಬ್ಯಾಂಕ್ ಕೂಡಾ ಎಲ್‌ಒಯು ನೀಡಲು ಒಪ್ಪುತ್ತಿಲ್ಲ. ಎಲ್‌ಒಯು ಮೂಲಕ ವಿದೇಶಗಳಲ್ಲಿ ಹಣ ಪಡೆಯುವ ಕಂಪೆನಿಗಳ ವ್ಯವಹಾರದ ಮೇಲೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪ್ರಾಮಾಣಿಕ ವ್ಯಾಪಾರಿಗಳ ವ್ಯವಹಾರದ ಮೇಲೆ ಪರಿಣಾಮ ಬೀರದಿರಲಿ ಎಂಬ ಉದ್ದೇಶದಿಂದ ಎಲ್‌ಒಯು ನೀಡುವುದನ್ನು ಸಂಪೂರ್ಣವಾಗಿ ಸ್ಥಗಿಗೊಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಭಾಗಿಯಾಗಿರುವ ಪಿಎನ್‌ಬಿ ಹಗರಣದಲ್ಲಿ ಸರಿಯಾದ ಪರಿಶೀಲನೆ ನಡೆಸದೆ ಎಲ್‌ಒಯು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಗರಣದಲ್ಲಿ ಬ್ಯಾಂಕ್‌ನ ಹಲವು ಅಧಿಕಾರಿಗಳು ಕೂಡಾ ಮೋದಿ ಜೊತೆ ಮೀಲಾಗಿರುವುದು ಬೆಳಕಿಗೆ ಬಂದಿದೆ.

ಕಂಪೆನಿಗಳು ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ನೆರವಾಗಲು ದೇಶೀಯ ಬ್ಯಾಂಕ್‌ಗಳು ಒಪ್ಪಿಗೆ ಪತ್ರವನ್ನು (ಎಲ್‌ಒಯು) ನೀಡುತ್ತವೆ. ಈ ಪತ್ರದ ಆಧಾರದಲ್ಲಿ ಕಂಪೆನಿಗಳು ವಿದೇಶಗಳಲ್ಲಿ ತಮ್ಮ ವ್ಯವಹಾರಗಳನ್ನು ಸಲೀಸಾಗಿ ನಡೆಸಲು ಸಾಧ್ಯವಾಗುತ್ತದೆ. ದೇಶೀಯ ಬ್ಯಾಂಕ್‌ಗಳು ತಾವು ನೀಡುವ ಪತ್ರದ ಮೇಲೆ ಕನಿಷ್ಟ ಪ್ರಮಾಣದ ಮೊತ್ತವನ್ನು ಈ ಸಂಸ್ಥೆಗಳಿಂದ ಪಡೆದುಕೊಳ್ಳುತ್ತವೆ.
ಭಾರತದ ಪ್ರತಿಷ್ಠಿತ ಬ್ಯಾಂಕ್‌ವೊಂದರ ಅಧಿಕಾರಿಗಳ ಪ್ರಕಾರ ಎಲ್‌ಯು ಅತ್ಯಂತ ಸುರಕ್ಷಿತ ಸಾಲ ವಿಧಾನವಾಗಿದ್ದು ಸಾಲಗಾರ ಕಂಪೆನಿಗಳು ಇದುವರೆಗೂ ಬ್ಯಾಂಕ್‌ಗಳಿಗೆ ಹಣ ಪಾವತಿಸದೆ ಇರುವ ನಿದರ್ಶನಗಳಿಲ್ಲ. ಆದರೆ ಇದೇ ಮೊದಲ ಬಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಮೂಲಕ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಎಲ್‌ಒಯುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News