ವಿದೇಶದಲ್ಲಿ ಚಿಕಿತ್ಸೆ ಪಡೆಯಲಿರುವ ಪಾರಿಕ್ಕರ್?

Update: 2018-03-05 09:00 GMT

ಪಣಜಿ, ಮಾ.5: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಆರೋಗ್ಯ ತಪಾಸಣೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೋಮವಾರ ತೆರಳಿದ್ದು, ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಮುಂಬೈಗೆ ತೆರಳುವ ಮೊದಲು ತನ್ನ ಖಾಸಗಿ ನಿವಾಸ ಡೋನಾ ಪೌಲಾದಲ್ಲಿ ತನ್ನ ಸರಕಾರದ ಹಿರಿಯ ಸಚಿವರ ಸಭೆ ಕರೆದಿರುವ ಪಾರಿಕ್ಕರ್ ಸಂಪುಟ ಸಲಹಾ ಸಮಿತಿಯನ್ನು ರಚಿಸಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಈ ಸಮಿತಿ ರಚಿಸಿದ್ದಾರೆ ಎನ್ನಲಾಗಿದೆ.

ಪಾರಿಕ್ಕರ್ ಫೆ.15 ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಫೆ.22 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು ಅದೇ ದಿನ ಗೋವಾ ವಿಧಾನಸಭೆಗೆ ತೆರಳಿ ಬಜೆಟ್ ಮಂಡಿಸಿದ್ದರು. ಈ ವೇಳೆ ಸಂಕ್ಷಿಪ್ತ ಭಾಷಣವನ್ನು ಮಾಡಿದ್ದರು. ಪಾರಿಕ್ಕರ್ ಅನಾರೋಗ್ಯದ ಕಾರಣದಿಂದ ಸದನವು ನಾಲ್ಕೇ ದಿನಗಳಲ್ಲಿ ಕೊನೆಗೊಂಡಿತ್ತು.

ಮತ್ತೊಮ್ಮೆ ಅನಾರೋಗ್ಯಕ್ಕೀಡಾಗಿದ್ದ ಪಾರಿಕ್ಕರ್ ಫೆ.25 ರಂದು ಗೋವಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದರು. ಮಾ.1 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

‘‘ಮುಖ್ಯಮಂತ್ರಿಗಳು ಇಂದು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಮುಂಬೈಗೆ ಪ್ರಯಾಣಿಸುತ್ತಿದ್ದಾರೆ. ವೈದ್ಯರ ವರದಿಯನ್ನು ಆಧರಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಯಿದೆ’’ ಮುಖ್ಯಮಂತ್ರಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News