3,200 ಕೋ.ರೂ. ಟಿಡಿಎಸ್ ಹಗರಣ ಪತ್ತೆಹಚ್ಚಿದ ಐಟಿ ಇಲಾಖೆ: 447 ಕಂಪೆನಿಗಳು ಶಾಮೀಲು

Update: 2018-03-05 10:37 GMT

ಮುಂಬೈ, ಮಾ.5: ಆದಾಯ ತೆರಿಗೆ ಇಲಾಖೆ 3,200 ಕೋಟಿ ರೂ. ಹಗರಣವೊಂದನ್ನು ಪತ್ತೆ ಹಚ್ಚಿದೆ. ಸುಮಾರು 447 ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ತೆರಿಗೆ ಮೊತ್ತವನ್ನು ಕಳೆದು ವೇತನ ನೀಡಿದ್ದರೂ ತೆರಿಗೆ ಹಣವನ್ನು ಸರಕಾರಕ್ಕೆ ಪಾವತಿ ಮಾಡದೆ ಉದ್ಯಮ ಉದ್ದೇಶಕ್ಕೆ ಬಳಿಸಿರುವುದು  ತಿಳಿದು ಬಂದಿದೆ.

ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ಘಟಕವು ಈ ಕಂಪೆನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಕೆಲ ಪ್ರಕರಣಗಳಲ್ಲಿ ವಾರಂಟ್ ಕೂಡ ಜಾರಿಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಐಟಿ ಕಾಯಿದೆಯ ಸೆಕ್ಷನ್ 276 ಬಿ  ಪ್ರಕಾರ ಈ ಅಪರಾಧಕ್ಕೆ ಕನಿಷ್ಠವೆಂದರೆ ಮೂರು ತಿಂಗಳು ಹಾಗೂ ಗರಿಷ್ಠವೆಂದರೆ ಏಳು ವರ್ಷಗಳ ತನಕ ಕಠಿಣ ಜೈಲು ಶಿಕ್ಷೆ ಹೊರತಾಗಿ  ದಂಡ ಕೂಡ ಪಾವತಿಸಬೇಕಾಗಬಹುದು.

ಈ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವಂಚನೆವೆಸಗಿದ್ದಕ್ಕೆ ಸಮನಾಗಿರುವುದರಿಂದ ವಂಚನೆ ಹಾಗೂ ವಿಶ್ವಾಸ ದ್ರೋಹಕ್ಕಾಗಿಯೂ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಬಹುದೇ ಎಂದು ಆದಾಯ ತೆರಿಗೆ ಇಲಾಖೆ ಪರಿಶೀಸಲಿಸುತ್ತಿದೆ.

ಈ ಅಪರಾಧವೆಸಗಿದವರಲ್ಲಿ ಹೆಚ್ಚಿನವರು ಬಿಲ್ಡರ್ ಗಳಾಗಿದ್ದು ಅವರಲ್ಲೊಬ್ಬ ಪ್ರಭಾವಿ ಉದ್ಯಮಿ ತಮ್ಮ ಉದ್ಯೋಗಿಗಳ ವೇತನದಿಂದ ಟಿಡಿಎಸ್ ಕಡಿತಗೊಳಿಸಿ ಅದನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆನ್ನಲಾಗಿದೆ. ಆರೋಪಿ ಕಂಪೆನಿಗಳಲ್ಲಿ ಸಿನೆಮಾ ನಿರ್ಮಾಣ ಸಂಸ್ಥೆಗಳು, ಮೂಲಭೂತ ಸೌಕರ್ಯಾಭಿವೃದ್ಧಿ ಕಂಪೆನಿಗಳು,  ಸ್ಟಾರ್ಟ್-ಅಪ್ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳೂ ಸೇರಿವೆ.  ಈ ಉಲ್ಲಂಘನೆ ಎಪ್ರಿಲ್ 2017 ಹಾಗೂ ಮಾರ್ಚ್ 2018ರ ನಡುವೆ ನಡೆದಿದೆ ಎನ್ನಲಾಗಿದೆ.

ಪಾವತಿಯಾಗದ ತೆರಿಗೆ ಹಣವನ್ನು ಹಿಂದಕ್ಕೆ ಪಡೆಯುವ ಸಲುವಾಗಿ ಐಟಿ ಇಲಾಖೆ  ತಪ್ಪಿತಸ್ಥ ಕಂಪೆನಿಗಳ ಸ್ಥಿರ ಮತ್ತು ಚರಾಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು  ಹಾಕುವ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News