ಕೋಮುವಾದಿಗಳನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗಬೇಕು: ಸಿದ್ಧರಾಮಯ್ಯ

Update: 2018-03-05 12:51 GMT

ಮೈಸೂರು,ಮಾ.5: ಕೋಮುವಾದಿಗಳನ್ನು ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ನಗರ ಹಾಗೂ ನಂಜನಗೂಡಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೋಮವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಸಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಅವರು, ಕೋಮುವಾದಿಗಳನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗುವ ಅಗತ್ಯವಿದೆ. ನಮ್ಮ ಟಾರ್ಗೆಟ್ ಕೋಮುವಾದಿ ಪಕ್ಷವನ್ನು ಸೋಲಿಸುವುದು ಎಂದು ಹೇಳಿದರು.

ರಾಜ್ಯ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ. ಜೆಡಿಎಸ್ ಪಕ್ಷದ ಜೊತೆ ಇದುವರೆಗೂ ಮಾತನಾಡಿಲ್ಲ, ಅದರ ಅಗತ್ಯವೂ ನಮಗಿಲ್ಲ. ಮೇಘಾಲಯ ಹಾಗೂ ತ್ರಿಪುರ ಚುನಾವಣೆ ಎಫೆಕ್ಟ್ ರಾಜ್ಯದಲ್ಲಿ ಆಗಲ್ಲ. ಪ್ರಧಾನಿ ನರೇಂದ್ರ ಮೋದಿ ನಾಲ್ಕೈದು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಅವರ ಯಾವ ಗಾಳಿಯೂ ರಾಜ್ಯದಲ್ಲಿ ಬೀಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇಂದು ಸಂಜೆ ನಾನು ದೆಹಲಿಗೆ ಹೋಗಲಿದ್ದು, ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದೇನೆ. ರಾಜ್ಯಸಭಾ ಚುನಾವಣೆಗೆ ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಮೈಸೂರು ವಿಭಾಗದಲ್ಲಿ ರಾಹುಲ್ ಗಾಂಧಿ ಪ್ರವಾಸಕ್ಕೆ ಪ್ರತಿಕ್ರಿಯಿಸಿದ ಅವರು, ಮೈಸೂರು ವಿಭಾಗದಲ್ಲಿ ಮಾ.20,21 ಹಾಗೂ 23,24 ರೋಡ್ ಶೋ ನಡೆಯಲಿದ್ದು, 25 ರಂದು ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. 

ಜೆಡಿಎಸ್, ಬಿಎಸ್ ಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಓಟ್ ಗೆ ಧಕ್ಕೆಯಾಗಲ್ಲ. ಜೆಡಿಎಸ್-ಬಿಎಸ್‍ಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಯಾವುದೇ ಪೆಟ್ಟು ಬೀಳಲ್ಲ. ನಮ್ಮ ಮತ ನಮ್ಮ ಬಳಿಯೇ ಇದೆ. ಬೆಂಗಳೂರು ವಿಭಾಗದಲ್ಲಿ ನಮ್ಮ ಪಕ್ಷ 25 ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಸಿದ್ಧರಾಮಯ್ಯ ವ್ಯಕ್ತಪಡಿಸಿದರು.

ಅಶೋಕ್ ಖೇಣಿ ಇಂದು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಕಾಂಗ್ರೆಸ್ ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. ಅಶೋಕ್ ಖೇಣಿ ಸೇರ್ಪಡೆಗೆ ಬೆಂಗಳೂರಿನ ಯಾವ ಶಾಸಕರ ವಿರೋಧವು ಇಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಊಹಾಪೋಹ ಎಂದರು.

ಈ ಸಂದರ್ಭ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ, ಶಾಸಕ ಕಳಲೆ ಕೇಶವಮೂರ್ತಿ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ವಿವಿಧ ನಿಮಗಮ ಮಂಡಳಿ ಅಧ್ಯಕ್ಷರಾದ ಬಿ.ವಿ.ಸೀತಾರಾಂ, ಎಚ್.ಎ.ವೆಂಕಟೇಶ್, ಕಾಂಗ್ರೆಸ್ ಮುಖಂಡ ಕೆ.ಎಸ್.ಶಿವರಾಂ, ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News