ಚಿಕ್ಕಮಗಳೂರು: ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕಾರ್ಯಾರಂಭ
ಜೀವ ವೈವಿಧ್ಯ ಕೇಂದ್ರದ ಕಟ್ಟಡದಲ್ಲಿ ಪ್ರತಿಷ್ಠಾನದ ಕಚೇರಿ
ತೇಜಸ್ವಿ ಹೆಸರಿನಲ್ಲಿ ವಸ್ತುಸಂಗ್ರಹಾಲು ಸ್ಥಾಪನೆ
ಏ.5ಕ್ಕೆ ಪಶ್ಚಿಮ ಘಟ್ಟದ ಸವಾಲುಗಳ ಕುರಿತು ವಿಚಾರ ಸಂಕಿರಣ
ಚಿಕ್ಕಮಗಳೂರು, ಮಾ.5: ರಾಜ್ಯ ಸರಕಾರ ಸ್ಥಾಪಿಸಿದ್ದ ಸಾಹಿತಿ ದಿ.ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವನ್ನು ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡುವ ಮೂಲಕ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಸೋಮವಾರ ಅಧಿಕೃತವಾಗಿ ಆರಂಭಿಸಲಾಯಿತು.
ಕಳೆದ ವರ್ಷ ರಾಜ್ಯ ಸರಕಾರ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವನ್ನು ಸ್ಥಾಪಿಸಿ ಸರಕಾರೇತರ ಸದಸ್ಯರನ್ನಾಗಿ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಕೆಂಜಿಗೆ ಪ್ರದೀಪ್, ತೇಜಸ್ವಿ ಅವರ ಪತ್ನಿ ರಾಜೇಶ್ವರಿ, ತೇಜಸ್ವಿ ಅವರ ಒಡನಾಡಿಗಳಾದ ಈಶ್ವರ ಪ್ರಸಾದ್, ನಾಗೇಶ್ ಹೆಗ್ಗಡೆ, ಡಾ.ನಂಜಪ್ಪ ಮತ್ತು ಆರ್.ರಾಘವೇಂದ್ರ ಅವರನ್ನು ನೇಮಕ ಮಾಡಿತ್ತು. ಪದನಿಮಿತ್ತ ಸದಸ್ಯರನ್ನಾಗಿ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಸಹಾಯಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ, ಜಿಲ್ಲಾ ಪರಿಸರಾಧಿಕಾರಿ, ಅರಣ್ಯಾಧಿಕಾರಿ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ನೇಮಿಸಿತ್ತು. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರನ್ನು ಪ್ರತಿಷ್ಠಾನದ ಅಧ್ಯಕ್ಷರನ್ನಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಅವರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ತೇಜಸ್ವಿ ಅವರ ಶಿಷ್ಯ ಈಶ್ವರ ಪ್ರಸಾದ್ ಅವರನ್ನು ಸಹಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನಗರದ ಉಪನೋಂದಣಾಧಿಕಾರಿಗಳ ಕಚೇರಿಗೆ ತೆರಳಿದ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಪ್ರತಿಷ್ಠಾನವನ್ನು ಉಪನೋಂದಣಾಧಿಕಾರಿ ಬಿ.ದೇವರಾಜ್ ಅವರ ಸಮ್ಮುಖದಲ್ಲಿ ನೋಂದಣಿ ಮಾಡುವ ಮೂಲಕ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್, ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ, ಪರಿಸರದ ಬಗ್ಗೆ ಅವರಗಿದ್ದ ಕಾಳಜಿ, ಕಳಕಳಿ ಮತ್ತು ಆ ನಿಟ್ಟಿನಲ್ಲಿ ಅವರು ಮಾಡಿರುವ ಕೆಲಸಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಇಂದಿನಿಂದ ಕಾರ್ಯಾರಂಭ ಮಾಡುತ್ತದೆ. ಸ್ಥಳೀಯ ಶಾಸಕರು, ಸಂಸದರು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ತೇಜಸ್ವಿಯವರ ಒಡನಾಡಿಗಳು ಪ್ರತಿಷ್ಠಾನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತೇಜಸ್ವಿಯವರ ಹೆಸರಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಸ್ಥಾಪಿಸಿರುವ ಜೀವ ವೈವಿಧ್ಯ ಕೇಂದ್ರದ ಕಟ್ಟಡದಲ್ಲಿ ಪ್ರತಿಷ್ಠಾನದ ಕಚೇರಿ ಕಾರ್ಯಾರಂಭ ಮಾಡಲಿದ್ದು, ಅಲ್ಲಿಂದಲೇ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಪಶ್ಚಿಮ ಘಟ್ಟದಲ್ಲಿರುವ ಪ್ರಾಣಿ ಸಂಕುಲಗಳು, ಸಸ್ಯ ಸಂಕುಲಗಳ ಬಗ್ಗೆ ಆರ್ಕಿಡ್‍ಗಳ ಬಗ್ಗೆ ಇತರ ಅನೇಕ ಜೀವಿಗಳ ಬಗ್ಗೆ ಸಂಶೋಧನೆ ನಡೆಸುವುದರ ಜೊತೆಗೆ ತೇಜಸ್ವಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಚಾರಣದ ಪ್ರದೇಶಗಳಲ್ಲಿ ನಿರಂತರವಾಗಿ ಚಾರಣ ಏರ್ಪಡಿಸಲಾಗುವುದು. ಪಶ್ಚಿಮ ಘಟ್ಟಗಳ ಪರಿಸರದ ಬಗ್ಗೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಿ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ, ಈಗಾಗಲೇ ರಾಜ್ಯ ಸರಕಾರ ಪ್ರತಿಷ್ಠಾನಕ್ಕೆ 5 ಕೋಟಿ ರೂ. ಮೂಲನಿಧಿಯಾಗಿ ತೆಗೆದಿಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಸಹ ಈ ವರ್ಷಕ್ಕೆ ಕನಿಷ್ಠ 30 ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದೆ. ಸರಕಾರದ ಆರ್ಥಿಕ ನೆರವಿನ ಜೊತೆಗೆ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಿಗೆ ತೇಜಸ್ವಿಯವರ ಅಭಿಮಾನಿಗಳು, ಹಿತೈಷಿಗಳು, ಪರಿಸರದ ಬಗ್ಗೆ ಆಸಕ್ತಿ ಇರುವವರು ನೆರವು ಒದಗಿಸುವ ಭರವಸೆ ನೀಡಿದ್ದು, ಅದರ ನೆರವಿನಿಂದ ಕಾರ್ಯಚಟುವಟಿಕೆ ನಡೆಸಲಾಗುವುದು ಎಂದರು.
ತೇಜಸ್ವಿಯವರ ಒಡನಾಡಿಯಾಗಿದ್ದ ಎಲ್ಲ ವಸ್ತುಗಳನ್ನು ಒಳಗೊಂಡ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಯೋಜನೆಯಿದೆ ಎಂದ ಅವರು, ತೇಜಸ್ವಿ ಅವರು ನಿಧನರಾದ ಏ.5ರಂದು ಪರಿಸರ, ಸಾಹಿತ್ಯ, ಪಶ್ಚಿಮ ಘಟ್ಟಗಳಿಗೆ ಜೀವ ಸಂಕುಲಗಳಿಗೆ ಸಂಬಂಧಪಟ್ಟ ಹಾಗೆ ಪಶ್ಚಿಮ ಘಟ್ಟಗಳ ಭಾಗ ಎದುರಿಸುತ್ತಿರುವ ಸವಾಲುಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ತೇಜಸ್ವಿಯವರ ಒಡನಾಡಿಗಳಾದ ಈಶ್ವರ ಪ್ರಸಾದ್, ರಾಘವೇಂದ್ರ ಜನ್ನಾಪುರ, ಕೆಂಜಿಗೆ ಪ್ರದೀಪ್, ನಾಗೇಶ್ ಹೆಗ್ಗಡೆ, ಬಿ.ಎಂ.ಸಂದೀಪ್, ಕಾರ್ತಿಕ್ ಚೆಟ್ಟಿಯಾರ್ ಮತ್ತಿತರರು ಉಪಸ್ಥಿತರಿದ್ದರು,
ಪ್ರತಿಷ್ಠಾನ ಕಾರ್ಯಾರಂಭ ಮಾಡಿದ ಬಗ್ಗೆ ಸಂತಸವಾಗಿದೆ. ತೇಜಸ್ವಿಯವರು ನಗರದಿಂದ ಕಾಡಿಗೆ ಬಂದು ಬದುಕು ಕಂಡು ಕೊಂಡವರು. ಮುಂದಿನ ಜನಾಂಗಕ್ಕೆ ಪರಿಸರವನ್ನು ಹೇಗೆ ಉಳಿಸಬೇಕು ಎಂಬುದು ಅವರಿಗೆ ಮುಖ್ಯವಾಗಿತ್ತು. ಮನುಷ್ಯ ಬದುಕಬೇಕಾದರೆ ನಮ್ಮ ಪರಿಸರ, ಜೀವ ಸಂಕುಲ, ಸಸ್ಯ ಸಂಕುಲವೂ ಇರಬೇಕು ಹಾಗಾಗಿ ಕಾಡುಗಳು ಉಳಿಯಬೇಕು. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ತೇಜಸ್ವಿ ಯಾವಾಗಲೂ ಹೇಳುತ್ತಿದ್ದರು. ಆ ದಿಕ್ಕಿನಲ್ಲಿ ಪ್ರತಿಷ್ಠಾನ ಕಾರ್ಯೋನ್ಮುಖವಾಗಿರುವುದು ಸಂತಸ ತಂದಿದೆ. ತೇಜಸ್ವಿಯವರು ಬಳಸುತ್ತಿದ್ದ ಮತ್ತು ಅವರ ಒಡನಾಡಿಯಾಗಿದ್ದ ಎಲ್ಲ ವಸ್ತುಗಳನ್ನೂ ಪ್ರತಿಷ್ಠಾನ ಸ್ಥಾಪಿಸಲಿರುವ ವಸ್ತು ಸಂಗ್ರಹಾಲಯಕ್ಕೆ ನೀಡುತ್ತೇನೆ.
- ರಾಜೇಶ್ವರಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ