ರವಿಶಂಕರ್ ಅವರೇ ಇನ್ನೆಷ್ಟು ಸುಳ್ಳು ಹೇಳುತ್ತೀರಿ?

Update: 2018-03-06 10:49 GMT

ಹೊಸದಿಲ್ಲಿ,ಮಾ.6 :"ನಿರ್ಮೋಹಿ ಅಖಾಡದ ಮಹಂತ್ ಅವರು ಬೆಂಗಳೂರಿನ ತಮ್ಮ ಆಶ್ರಮಕ್ಕೆ  ಬಂದು ತಮಗೆ ಅಯ್ಯೋಧ್ಯೆ ಸಮಸ್ಯೆಗೆ ಶಾಂತಿಯುತ ಪರಿಹಾರ ಬೇಕಾಗಿದೆ. ಅದಕ್ಕಾಗಿ ಮಸೀದಿ ನಿರ್ಮಿಸಲು ಸ್ವಲ್ಪ ಭೂಮಿ ನೀಡಲು ಅವರು ಸಿದ್ಧರಿದ್ದಾರೆಂದು ಹೇಳಿದರು. ಹಿಂದು ಸಂತರಿಂದ ಈ ಆಫರ್ ಬಂದಿತ್ತು. ನಾವು ಮಸೀದಿಗೆ ಜಾಗ ನೀಡುವಾಗ ಮುಸ್ಲಿಮರು  ಆ ಭೂಮಿಯ ತುಂಡನ್ನು ನಮಗೇಕೆ ನೀಡಬಾರದು ಎಂದು ಅವರು ಹೇಳಿದ್ದರೆಂದು'' ಎನ್‍ಡಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಹೇಳಿರುವುದು ಇದೀಗ ವಿವಾದಕ್ಕೀಡಾಗಿದೆ.

ನಿರ್ಮೋಹಿ ಅಖಾಡಾದ ಮುಖ್ಯಸ್ಥ ಮಹಂತ ದಿನೇಂದ್ರ ದಾಸ್ ಅವರು  ರವಿಶಂಕರ್ ಅವರ ಹೇಳಿಕೆಯನ್ನು  ನಿರಾಕರಿಸಿದ್ದಾರಲ್ಲದೆ ಅವರನ್ನು ಸಂಧಾನಕ್ಕಾಗಿ ಸಂಪರ್ಕಿಸಿಯೇ ಇಲ್ಲ ಎಂದರಲ್ಲದೆ ರವಿಶಂಕರ್ ಅವರೇ ತಮ್ಮನ್ನು ಬೆಂಗಳೂರಿಗೆ ಆಹ್ವಾನಿಸಿದ್ದರು ಎಂದು ತಿಳಿಸಿದ್ದಾರೆ.

ಸಂದರ್ಶನದ ವೇಳೆ ಎನ್‍ಡಿಟಿವಿಯ ಪತ್ರಕರ್ತ ರವಿಶಂಕರ್ ಬಳಿ, “ನಿರ್ಮೋಹಿ ಅಖಾಡದ ಮಹಂತ್ ಅವರು  ನಿಮ್ಮ ಬಳಿ ಬಂದಿದ್ದರೇ ಅಥವಾ ನೀವು ಅವರನ್ನು ಆಹ್ವಾನಿಸಿದ್ದೇ ಎಂದು ಕೇಳಿದ್ದಕ್ಕೆ “ಇಲ್ಲ ಅವರು ಮೊದಲು ನನ್ನ ಬಳಿ ಬಂದಿದ್ದರು.  ನಂತರ ನಾನು ವಿವಿಧ ಜನರೊಡನೆ ಮಾತುಕತೆ ನಡೆಸಿದೆ,'' ಎಂದಿದ್ದರು.

“ಕೆಲ ಜನರು (ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ) ನ್ಯಾಯಾಲಯದ ಹೊರಗಿನ  ಇತ್ಯರ್ಥಕ್ಕೆ ವಿರೋಧವಾಗಿದ್ದಾರೆ ಎಂದು ಹೇಳಿದ್ದ ರವಿಶಂಕರ್ ಸುಪ್ರೀಂ ಕೋರ್ಟ್ ಈ ವಿಚಾರ ನಿರ್ಧರಿಸುವುದಾದರೆ ಅದರ ಪರಿಣಾಮದ ಬಗ್ಗೆಯೂ ಎಚ್ಚರಿಸಿದ್ದಾರಲ್ಲದೆ ದೇಶದಲ್ಲಿ ರಕ್ತಪಾತವಾಗಬಹುದು, ಭಾರತ ಇನ್ನೊಂದು ಸಿರಿಯಾ ಆಗಬಹುದು ಎಂದು ಅವರು ಹೇಳಿಕೊಂಡಿದ್ದರು.

ಈ ಬಗ್ಗೆಯೂ ತಮ್ಮ ಸ್ಪಷ್ಟೀಕರಣ ನೀಡಿದ ದಿನೇಂದ್ರ ದಾಸ್ “ನಮಗೆ ಶಾಂತಿಯುತ ಪರಿಹಾರ ಬೇಕಿದೆ. ಅದರರ್ಥ ನಾವು ನ್ಯಾಯಾಲಯದ ತೀರ್ಪನ್ನು ಮನ್ನಿಸುವುದಿಲ್ಲವೆಂದಲ್ಲ. ಬಾಬರಿ ಮಸೀದಿ ಕಟ್ಟಡವಿದ್ದಾಗಲೂ ಶಾಂತಿಯುತ ಪರಿಹಾರ ನಮಗೆ ಬೇಕಿತ್ತು,'' ಎಂದಿದ್ದಾರೆ.

ಎನ್‍ಡಿಟಿವಿ ಜತೆ ಮಾತನಾಡಿದ ರವಿಶಂಕರ್ “ಮುಸ್ಲಿಮರು ಐದು ಎಕರೆ ಭೂಮಿ ನೀಡುತ್ತಾರೆ, ನಿರ್ಮೋಹಿ ಅಖಾಡ ಈ ಬಗ್ಗೆ ಭರವಸೆ ನೀಡಿದೆ,'' ಎಂದಿದ್ದರೆ ರವಿಶಂಕರ್ ಸುಳ್ಳು ಹೇಳುತ್ತಿದ್ದಾರೆಂದು ಮಹಂತ ದಾಸ್ ತಿಳಿಸಿದ್ದಾರೆ.

‘ಔರ್ ಕಿತ್ನಾ ಝೂಟ್ ಬೋಲೇಂಗೆ ಶ್ರೀ ಶ್ರೀ ?’ ನಾವು 2.5 ಎಕರೆ ಬಗ್ಗೆ ಮಾತನಾಡಿದ್ದೇವೆಯೇ ಹೊರತು 5 ಎಕರೆಯಲ್ಲ. ನಮ್ಮಲ್ಲಿ ಲಭ್ಯವಿರುವುದು 2.5 ಎಕರೆ ಭೂಮಿ ಮಾತ್ರ. ನಾವು ಶ್ರೀರಾಮನ ಭಕ್ತರು. ನಾವು ರಕ್ತಪಾತದ ಬಗ್ಗೆ ಯಾವತ್ತೂ ಮಾತನಾಡುವುದಿಲ್ಲ. ಮತೀಯ ಸಾಮರಸ್ಯ ಕಾಪಾಡುವುದೇ ನಮ್ಮ ಉದ್ದೇಶ,'' ಎಂದು ಮಹಂತ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News