ಮೈಮುಚ್ಚುವ ಉಡುಗೆ ತೊಟ್ಟು ದೇಹದಾರ್ಢ್ಯ ಪ್ರಶಸ್ತಿ ಗೆದ್ದ ಮಜಿಝಿಯಾ ಬಾನು

Update: 2018-03-06 15:36 GMT

ಕೊಚ್ಚಿ, ಮಾ.6: ಕಳೆದ ವಾರ ನಗರದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯ ವೇದಿಕೆಗೆ ಮೈಮುಚ್ಚುವ ಉಡುಗೆ ಧರಿಸಿ ಬಂದಿದ್ದ ಮಜಿಝಿಯಾ ಬಾನು ಬಂದಾಗ ಪ್ರೇಕ್ಷಕರು ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದರು. ಆದರೆ ವೇದಿಕೆ ಮೇಲೆ ಮಜಿಝಿಯಾ ದೇಹಧಾರ್ಢ್ಯ ಪ್ರದರ್ಶನ ಮಾಡುತ್ತಲೇ ಪ್ರೇಕ್ಷಕರಿಗೆ ಇವರೂ ಕೂಡ ಸ್ಪರ್ಧಿ ಎಂದು ಅರಿವಾಗಿತ್ತು.

ಡೆಂಟಲ್ ಸರ್ಜರಿಯಲ್ಲಿ ಪದವಿ ಮಾಡುತ್ತಿರುವ ಮಜಿಝಿಯಾ ಫೈನಲ್ ನಲ್ಲಿ ಐವರು ಸ್ಪರ್ಧಿಗಳನ್ನು ಸೋಲಿಸಿ ದೇಹಧಾರ್ಢ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಬಾಲ್ಯದಿಂದಲೂ ಕ್ರೀಡಾಳುವಾಗಿದ್ದ ಮಜಿಝಿಯಾ, ದೇಹದಾರ್ಢ್ಯ ಅನಿರೀಕ್ಷಿತ ತೀರ್ಮಾನವಾಗಿತ್ತು ಎನ್ನುತ್ತಾರೆ.

“ನಾನು ವೇಟ್ ಲಿಫ್ಟಿಂಗ್ ನಲ್ಲಿ ಸಕ್ರಿಯಳಾಗಿದ್ದೆ. ಆದರೆ ದೇಹಧಾರ್ಢ್ಯದ ಬಗ್ಗೆ ಆಲೋಚಿಸಿರಲಿಲ್ಲ. ನನಗೆ ನನ್ನ ಪತಿಯೇ ಪ್ರೋತ್ಸಾಹ ನೀಡಿದರು” ಎಂದು ಮಾಹೆಯ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ ವಿದ್ಯಾರ್ಥಿನಿಯಾಗಿರುವ ಮಜಿಝಿಯಾ ಹೇಳುತ್ತಾರೆ.

ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಲಪ್ಪುಳಕ್ಕೆ ತೆರಳುತ್ತಿದ್ದ ಮಜಿಝಿಯಾರಲ್ಲಿ ಅವರ ಪತಿ ನೂರ್ ಅಹ್ಮದ್ ದೇಹದಾರ್ಢ್ಯ ಸ್ಪರ್ಧೆಯಲ್ಲೂ ಪಾಲ್ಗೊಳ್ಳುವಂತೆ ತಿಳಿಸಿದ್ದರಂತೆ. 2017ರಲ್ಲಿ ಇಂಡೋನೇಶ್ಯದಲ್ಲಿ ನಡೆದ ಏಶಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿಮ ಮಜಿಝಿಯಾ ಬೆಳ್ಳಿಪದಕವನ್ನು ಗೆದ್ದಿದ್ದರು.

“ಹಿಜಾಬ್ ನನ್ನ ಗುರುತಾಗಿದೆ. ಹಿಜಾಬ್ ಧರಿಸುವುದು ನನಗೆ ಹೆಮ್ಮೆ ಇಂಡೋನೇಶ್ಯದಲ್ಲಿ ಪವರ್  ಲಿಫ್ಟಿಂಗ್ ನಲ್ಲಿ ಭಾಗವಹಿಸಿದ್ದಾಗ ಹಿಜಾಬ್ ಧರಿಸಿ ಭಾರೀ ತೂಕವನ್ನು ಎತ್ತಿದ ಮೊದಲ ಮಹಿಳೆ ನಾನು ಎಂದು ಹಲವು ಪತ್ರಿಕೆಗಳು ವರದಿ ಮಾಡಿದ್ದವು” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News