2019ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಆಂಧ್ರಕ್ಕೆ ವಿಶೇಷ ಸ್ಥಾನಮಾನ: ರಾಹುಲ್

Update: 2018-03-06 15:41 GMT

ಹೊಸದಿಲ್ಲಿ,ಮಾ.6: ‘2019ರಲ್ಲಿ ನಾವು ಅಧಿಕಾರಕ್ಕೆ ಬಂದಾಗ’ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಆಂಧ್ರದ ಜನತೆಯ ಈ ಬೇಡಿಕೆಗೆ ತನ್ನ ಪಕ್ಷದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಮಂಗಳವಾರ ವೀಡಿಯೊ ಮತ್ತು ‘ಐಎನ್‌ಸಿ ಸ್ಟಾಂಡ್ಸ್ ವಿತ್ ಆಂಧ್ರ’ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್‌ನಲ್ಲಿ,‘‘ನಾನು ಇಂದು ಮಧ್ಯಾಹ್ನ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯೊಂದಿಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ. ಈ ವಿಷಯದಲ್ಲಿ ಪ್ರತಿಪಕ್ಷವು ಒಗ್ಗಟ್ಟಿನಿಂದಿದ್ದರೆ ಆಂಧ್ರದ ಜನರಿಗೆ ನ್ಯಾಯವೊದಗಿಸುವಂತೆ ನಾವು ಬಿಜೆಪಿ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡವನ್ನು ಹೇರಬಹುದು’’ ಎಂದು ಹೇಳಿದ್ದಾರೆ. 2019ರಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ಮಾಡುವ ಮೊದಲ ಕೆಲಸವೆಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ಎಂದು ಅವರು ವೀಡಿಯೊದಲ್ಲಿ ಆ ರಾಜ್ಯದ ಜನತೆಗೆ ಭರವಸೆಯನ್ನೂ ನೀಡಿದ್ದಾರೆ.

ರಾಹುಲ್ ಗಾಂಧಿಯವರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆಗೆ ತನ್ನ ಬೆಂಬಲವನ್ನು ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳೂ ಅವರು ಆಂಧ್ರದ ಜನತೆಯ ನ್ಯಾಯಯುತ ಬೇಡಿಕೆಗಳನ್ನು ಬೆಂಬಲಿಸಿ ಟ್ವೀಟಿಸಿದ್ದರು.

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ಸೇರಿದಂತೆ ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆ,2014ರಲ್ಲಿಯ ಎಲ್ಲ ವಿಷಯಗಳ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳುವಂತೆ ಸೋಮವಾರ ಆಂಧ್ರಪ್ರದೇಶದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ಕೇಂದ್ರವನ್ನು ಕೋರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News