ಪಿಎನ್‌ಬಿ ವಂಚನೆ ಪ್ರಕರಣ: ರಾಜ್ಯಸಭೆ ಕಲಾಪಕ್ಕೆ ದ್ವಿತೀಯ ದಿನವೂ ಅಡ್ಡಿ, ಮುಂದೂಡಿಕೆ

Update: 2018-03-06 16:21 GMT

ಹೊಸದಿಲ್ಲಿ, ಮಾ.6: ಪಿಎನ್‌ಬಿ ವಂಚನೆ ಪ್ರಕರಣ ಖಂಡಿಸಿ ಗದ್ದಲ, ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಗೆ ಆಗ್ರಹದಿಂದ ರಾಜ್ಯಸಭೆಯ ಕಲಾಪಗಳಿಗೆ ದ್ವಿತೀಯ ದಿನವೂ ಭಂಗ ಉಂಟಾಯಿತು ಹಾಗೂ ಹಲವು ಬಾರಿ ಕಲಾಪವನ್ನು ಮುಂದೂಡಲಾಯಿತು.

ಬೆಳಗ್ಗಿನ ಅವಧಿಯಲ್ಲಿ ಎರಡು ಬಾರಿ ಕಲಾಪ ಮುಂದೂಡಲ್ಪಟ್ಟ ಬಳಿಕ ಅಪರಾಹ್ನ 2:00 ಗಂಟೆಗೆ ಸದನ ಮರು ಸಮಾವೇಶಗೊಂಡಾಗ ಟಿಎಂಸಿ ಸದಸ್ಯರು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಸಂಸದರು ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಲು ಆರಂಭಿಸಿದರು. ಸದಸ್ಯರನ್ನು ಸ್ವಸ್ಥಾನಕ್ಕೆ ಮರಳುವಂತೆ ರಾಜ್ಯ ಸಭೆಯ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಮಾಡಿದ ಪ್ರಯತ್ನ ವಿಫಲವಾದಾಗ ಕಲಾಪವನ್ನು 3:30ರವರೆಗೆ ಮುಂದೂಡಲಾಯಿತು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಟಿಡಿಪಿ, ಎಐಎಡಿಎಂಕೆ ಹಾಗೂ ಟಿಎಂಸಿ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆ ಆರಂಭಿಸಿದರು. ಕೆಲವರು ಕೈಯಲ್ಲಿ ಭಿತ್ತಿಫಲಕ ಹಿಡಿದಿದ್ದರು. ಪ್ರತಿಯೊಬ್ಬ ಸದಸ್ಯನ ಅಹವಾಲನ್ನೂ ಪ್ರತ್ಯೇಕವಾಗಿ ಆಲಿಸುವುದಾಗಿ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಹೇಳಿದರೂ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಸದನವು ಯಾವುದೇ ಚರ್ಚೆಗೆ ಸಿದ್ಧವಿದೆ. ಆದರೂ ಈ ರೀತಿ ವರ್ತಿಸುವ ಮೂಲಕ ನೀವು ಗೂಂಡಾಗಳ ಮಟ್ಟಕ್ಕೆ ಇಳಿದಿದ್ದೀರಿ ಎಂದು ಉಪಸಭಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಭಿತ್ತಿಫಲಕ ಪ್ರದರ್ಶಿಸುವುದು ನಿಯಮಬಾಹಿರವಾಗಿದೆ. ಹೀಗೆ ಮಾಡಬೇಡಿ. ರಾಜ್ಯಸಭೆಯ ಸದಸ್ಯರಿಗೆ ಘನತೆಯಿದೆ. ಈ ರೀತಿಯ ವರ್ತನೆ ಸದಸ್ಯರಿಂದ ನಿರೀಕ್ಷಿಸಿರಲಿಲ್ಲ ಎಂದ ಕುರಿಯನ್, ಚರ್ಚೆ ಹಾಗೂ ಮಾತುಕತೆ ಸಂಸದೀಯ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ನಿಮ್ಮ ಅಹವಾಲುಗಳಿಗೆ ಪ್ರತಿಕ್ರಿಯೆ ನೀಡುವಂತೆ ಸರಕಾರಕ್ಕೆ ಸೂಚಿಸುತ್ತೇನೆ ಎಂದು ಕುರಿಯನ್ ತಿಳಿಸಿದರು. ಆದರೆ ಸದಸ್ಯರು ಪ್ರತಿಭಟನೆ ಮುಂದುವರಿಸಿದಾಗ ಕಲಾಪವನ್ನು 3:30ರವರೆಗೆ ಮುಂದೂಡಲಾಯಿತು. ನಾವು ಓಡಿಹೋಗುತ್ತಿಲ್ಲ. ಸರಕಾರ ಚರ್ಚೆಗೆ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರ ಖಾತೆಯ ಉಪಸಚಿವ ವಿಜಯ್ ಗೋಯೆಲ್ ಸದಸ್ಯರಿಗೆ ನೀಡಿದ ಭರವಸೆಯೂ ಫಲ ನೀಡಲಿಲ್ಲ. ಬೆಳಗ್ಗಿನ ಅವಧಿಯಲ್ಲಿ ಶೂನ್ಯಅವಧಿಯಲ್ಲಿ ಸದಸ್ಯರ ಗದ್ದಲದ ಕಾರಣ ರಾಜ್ಯ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು 11:30ರವರೆಗೆ ಕಲಾಪ ಮುಂದೂಡಿದರು. ಸಂಸತ್ ಕಲಾಪ ಗೌರವಯುತವಾಗಿ ಸಾಗುತ್ತಿಲ್ಲ. ಇದು ಜನರ ಮೇಲೆ ಪರಿಣಾಮ ಬೀರುತ್ತದೆ. ಸದಸ್ಯರ ವರ್ತನೆಯಿಂದ ತೀವ್ರ ಅಸಮಾಧಾನವಾಗಿದೆ ಎಂದು ನಾಯ್ಡು ಹೇಳಿದರು.

  ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರೂಪಿಸಿದ ಬಳಿಕ ಉಂಟಾಗಿರುವ ನಷ್ಟವನ್ನು ಸರಿಪಡಿಸಲು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಬೇಕೆಂದು ಟಿಡಿಪಿ ಮತ್ತು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಈ ವೇಳೆ ಬ್ಯಾನರ್ ಹಿಡಿದುಕೊಂಡು ಸದಸ್ಯರು ಘೋಷಣೆ ಕೂಗತೊಡಗಿದಾಗ ಅವರಿಗೆ ಎಚ್ಚರಿಕೆ ನೀಡಿದ ನಾಯ್ಡು, ಇದು ಮಾರುಕಟ್ಟೆಯಲ್ಲ. ಸಂಸತ್ತು. ನಿಮ್ಮನ್ನು ನೀವೇ ಅಪಮಾನಗೊಳಿಸುತ್ತಿದ್ದೀರಿ. ಸ್ವಲ್ಪ ಗೌರವದಿಂದ ವರ್ತಿಸಿ. ದೇಶದ ಜನತೆ ಗಮನಿಸುತ್ತಿದ್ದಾರೆ. ಸಂಸದ್ ಸದಸ್ಯರಿಗಿರುವ ಘನತೆಯನ್ನು ಮರೆಯದಿರಿ ಎಂದರು. ಆದರೂ ಗದ್ದಲ ಮುಂದುವರಿದಾಗ ಕಲಾಪವನ್ನು ಮುಂದೂಡಿದ ನಾಯ್ಡು, ಸಮಸ್ಯೆ ಪರಿಹರಿಸುವ ಮಾರ್ಗೋಪಾಯದ ಬಗ್ಗೆ ಚರ್ಚಿಸಲು ತಮ್ಮನ್ನು ಚೇಂಬರ್‌ನಲ್ಲಿ ಭೇಟಿ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News