ಮಂಡ್ಯ: ಜಿಲ್ಲಾಮಟ್ಟದ ಮಹಿಳಾ ಕ್ರೀಡಾ ಸ್ಪರ್ಧೆಗೆ ಚಾಲನೆ

Update: 2018-03-06 17:12 GMT

ಮಂಡ್ಯ, ಮಾ.6: ಮಹಿಳೆಯರು ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ದಿವಾಕರ್ ಸಲಹೆ ನೀಡಿದ್ದಾರೆ.

ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಂಗಳವಾರ ನಡೆದ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸಲು ಪ್ರಯತ್ನಿಸುವುದು ಮುಖ್ಯ. ಪ್ರಯತ್ನಕ್ಕೆ ತಕ್ಕ ಫಲ ಇದ್ದೇ ಇರುತ್ತದೆ. ವೈಫಲ್ಯ ಎಂಬುದು ಕಲಿಕೆಯ ಮೊದಲ ಮೆಟ್ಟಿಲು ಎಂಬುದನ್ನು ಅರಿಯಬೇಕು. ವೈಪಲ್ಯಕ್ಕೆ ಇರುವ ಕಾರಣಗಳನ್ನು ಅವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರಯತ್ನ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಇರಬೇಕು. ಪ್ರಯತ್ನ ಮಾಡುವುದು ಬಿಟ್ಟರೆ ಪ್ರತಿಫಲ ದೊರೆಯುವುದಿಲ್ಲ. ಪ್ರತಿ ಪ್ರಯತ್ನದಲ್ಲಿ ಗೆಲ್ಲಲು ಅಸಾಧ್ಯ. ಗೆಲುವಿಗೆ ಮುಖ್ಯವಾದ ಹಾದಿಯನ್ನು ಹಿಡಿಯುವ ಮೂಲಕ ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಮಾಡುತ್ತಲೇ ಇರಬೇಕೆಂದು ಅವರು ಕರೆ ನೀಡಿದರು.

ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು. ಪ್ರತಿಯೊಂದು ಮತವೂ ಅತ್ಯಮೂಲ್ಯ ಎಂಬುದನ್ನು ಅರಿತು, ಮುಂಬರುವ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡುವ ಮೂಲಕ ಚುನಾವಣೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಇಲಾಖೆಯ ನಿರೂಪಣಾಧಿಕಾರಿ ಎಸ್.ರಾಜಮೂರ್ತಿ ಬೋಧಿಸಿದರು.

ಶ್ರೀರಂಗಪಟ್ಟಣ ಸಿಡಿಪಿಓ ಎಚ್.ಆರ್.ಸುರೇಶ್, ದುದ್ದ ಸಿಡಿಪಿಓ ರಾಮಕೃಷ್ಣಯ್ಯ, ತೀರ್ಪುಗಾರರಾದ ಉಷಾರಾಣಿ, ಮಮತ, ಇಲಾಖೆಯ ಕೋಮಲ್‍ಕುಮಾರ್, ಶಕುಂತಲಾ, ಮೀನಾಕ್ಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News