ಬಿಜೆಪಿ ನಾಯಕನ ಬೆದರಿಕೆಯ ಬೆನ್ನಿಗೇ ಪೆರಿಯಾರ್ ಪ್ರತಿಮೆಯ ಮೇಲೆ ದಾಳಿ

Update: 2018-03-06 18:18 GMT

ವೆಲ್ಲೂರು, ಮಾ. 6: ವಿಚಾರವಾದಿ, ಸುಧಾರಕ ಪೆರಿಯಾರ್ ಅವರ ಪ್ರತಿಮೆಗಳನ್ನು ಉರುಳಿಸುವುದಾಗಿ ಬಿಜೆಪಿ ನಾಯಕರೊಬ್ಬರು ಬೆದರಿಕೆ ಹಾಕಿದ ಬೆನ್ನಿಗೇ ತಮಿಳುನಾಡಿನ ವೆಲ್ಲೂರಿನ ಪುರಸಭೆ ಕಚೇರಿಯ ಒಳಗಿದ್ದ ಪೆರಿಯಾರ್ ಅವರ ಪ್ರತಿಮೆಗೆ ಹಾನಿಯುಂಟು ಮಾಡಲಾಗಿದೆ. 

ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಇಲ್ಲಿನ ತಿರುಪಟ್ಟೂರ್ ಕಾರ್ಪೊರೇಶನ್ ಕಚೇರಿ ಒಳಗಿದ್ದ ಪೆರಿಯಾರ್ ಪ್ರತಿಮೆಯ ಮೇಲೆ ಗುಂಪೊಂದರಿಂದ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಪ್ರತಿಮೆಯ ಕನ್ನಡಕ ಹಾಗೂ ಮೂಗನ್ನು ಹಾನಿಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ಬೆನ್ನಿಗೇ ಅಲ್ಲಿದ್ದ ರಶ್ಯನ್ ಕಮ್ಯುನಿಸ್ಟ್  ಕ್ರಾಂತಿಕಾರಿ ಲೆನಿನ್ ಅವರ ಪ್ರತಿಮೆಯನ್ನು ಹೊಡೆದುರುಳಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ "ಈ ಲೆನಿನ್ ಯಾರು ? ಈತನಿಗೂ ಭಾರತಕ್ಕೂ ಏನು ಸಂಬಂಧ ? ಕಮ್ಯುನಿಸ್ಟರಿಗೂ ಭಾರತೀಯರಿಗೂ ಏನು ಸಂಬಂಧ ? ಇಂದು ಲೆನಿನ್ ಪ್ರತಿಮೆಯನ್ನು ಉರುಳಿಸಲಾಗಿದೆ, ನಾಳೆ ಇವಿಆರ್ ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ಉರುಳಿಸಲಾಗುವುದು" ಎಂದು ಫೇಸ್ ಬುಕ್ ನಲ್ಲಿ ತಮಿಳು ಭಾಷೆಯಲ್ಲಿ ಪೋಸ್ಟ್ ಹಾಕಿದ್ದರು. ಅದರ ಬೆನ್ನಿಗೆ ಪೆರಿಯಾರ್ ಪ್ರತಿಮೆಯ ಮೇಲೆ ದಾಳಿ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News