ಫೋರ್ಬ್ಸ್ ಪಟ್ಟಿ: ಬಿಲಿಯಾಧಿಪತಿಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ ಎಷ್ಟನೆ ಸ್ಥಾನ ಗೊತ್ತಾ?

Update: 2018-03-07 08:14 GMT

ಸ್ಯಾನ್ ಫ್ರಾನ್ಸಿಸ್ಕೋ, ಮಾ.7: 'ಫೋರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿ'ಯಲ್ಲಿ ಅಮೆಝಾನ್ ಸಿಇಒ ಜೆಫ್ ಬೆಝೊಸ್ ಅವರು ತಮ್ಮ 112 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಅಗ್ರಶ್ರೇಣಿ ಪಡೆದಿದ್ದಾರೆ. ಎರಡನೇ ಸ್ಥಾನವು ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಹೋಗಿದೆ. ಅವರು ಒಟ್ಟು ಆಸ್ತಿಯ  ಮೌಲ್ಯ 90 ಬಿಲಿಯನ್ ಡಾಲರ್ ಆಗಿದೆ.

ಈ ಪಟ್ಟಿಯಲ್ಲಿ ಭಾರತದ 119 ಬಿಲಿಯಾಧಿಪತಿಗಳಿದ್ದು, ಕಳೆದ ವರ್ಷಕ್ಕಿಂತ 18 ಮಂದಿ ಹೆಚ್ಚು ಬಿಲಿಯಾಧಿಪತಿಗಳು ಈಗಿದ್ದಾರೆ. ಇದರೊಂದಿಗೆ ಅಮೆರಿಕಾ ಹಾಗೂ ಚೀನಾದ ನಂತರ ಅತ್ಯಂತ ಹೆಚ್ಚು ಬಿಲಿಯಾಧಿಪತಿಗಳನ್ನು ಹೊಂದಿದ ಮೂರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಅಮೆರಿಕಾದಲ್ಲಿ 585 ಬಿಲಿಯಾಧಿಪತಿಗಳಿದ್ದರೆ, ಚೀನಾದ ಬಿಲಿಯಾಧಿಪತಿಗಳ ಸಂಖ್ಯೆ 373 ಆಗಿದೆ.

2018ರಲ್ಲಿಯೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಕಳೆದ ವರ್ಷಕ್ಕಿಂತ 16.9 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಅವರ ಒಟ್ಟು ಸಂಪತ್ತಿನ ಮೌಲ್ಯ 40.1 ಬಿಲಿಯನ್ ಡಾಲರ್ ಎಂದು ಮ್ಯಾಗಝಿನ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೇಳಲಾಗಿದೆ. ವಿಶ್ವದ ಬಿಲಿಯಾಧಿಪತಿಗಳ ಪಟ್ಟಿಯಲ್ಲಿ ಕಳೆದ ವರ್ಷ ತಮ್ಮ 23.2 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 33ನೇ ಸ್ಥಾನದಲ್ಲಿದ್ದ ಮುಖೇಶ್ ಈ ಬಾರಿ 19ನೇ ಸ್ಥಾನ ಗಳಿಸಿದ್ದಾರೆ.

ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಝೀಂ ಪ್ರೇಮ್ ಜಿ ಅವರು ತಮ್ಮ 18.8 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 58ನೇ ಸ್ಥಾನದಲ್ಲಿದ್ದಾರೆ.  ಲಕ್ಷ್ಮಿ ಮಿತ್ತಲ್ ತಮ್ಮ 18.5 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 62ನೇ ಸ್ಥಾನ ಪಡೆದಿದ್ದಾರೆ. ಅಂತೆಯೇ ಉದ್ಯಮಿಗಳಾದ ಶಿವ ನಾಡರ್ ಹಾಗೂ ದಿಲೀಪ್ ಶಾಂಘ್ವಿ ತಮ್ಮ 14.6 ಬಿಲಿಯನ್ ಡಾಲರ್ ಹಾಗೂ 12.8 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಹತ್ತು ಮಂದಿ ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿರುವ ಇತರರೆಂದರೆ- ಕುಮಾರ್  ಬಿರ್ಲಾ (127ನೇ ಸ್ಥಾನ,  11.8 ಬಿಲಿಯನ್ ಡಾಲರ್ ಸಂಪತ್ತು), ಉದಯ್ ಕೋಟಕ್ (143ನೇ ಸ್ಥಾನ, 10.7 ಬಿಲಿಯನ್ ಡಾಲರ್ ಸಂಪತ್ತು), ರಾಧಾಕೃಷ್ಣ ದಮಾನಿ (151ನೇ ಸ್ಥಾನ,  10 ಬಿಲಿಯನ್ ಡಾಲರ್ ಸಂಪತ್ತು, ಗೌತಮ್ ಅದಾನಿ (154ನೇ ಸ್ಥಾನ, 9.7 ಬಿಲಿಯನ್ ಡಾಲರ್ ಸಂಪತ್ತು)ಹಾಗೂ ಸೈರಸ್ ಪೂನಾವಾಲ (170ನೇ ಸ್ಥಾನ, 9.1 ಬಿಲಿಯ್ ಡಾಲರ್ ಸಂಪತ್ತು).

ಪತಂಜಲಿಯ ಸಹ ಸ್ಥಾಪಕರಾಗಿರುವ ಆಚಾರ್ಯ ಬಾಲಕೃಷ್ಣ ತಮ್ಮ 6.3 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 274ನೇ ಸ್ಥಾನದಲ್ಲಿದಾರೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಈ ಪಟ್ಟಿಯಲ್ಲಿ ಕಳೆದ ಬಾರಿ 544ನೇ ಸ್ಥಾನದಲ್ಲಿದ್ದರೆ ಈ ಬಾರಿ ಅವರ ಸ್ಥಾನ 766ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News