ರಾಜಸ್ಥಾನ: ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ

Update: 2018-03-07 14:43 GMT

ಜೈಪುರ,ಮಾ.7: ಜಿಲ್ಲಾ ಪರಿಷದ್ ಸದಸ್ಯರು, ಪಂಚಾಯತ್ ಸಮಿತಿ ಸದಸ್ಯರು ಮತ್ತು ನಗರ ಪಾಲಿಕೆ/ನಗರ ಪರಿಷದ್ ಸದಸ್ಯರ ಆಯ್ಕೆಗಾಗಿ ಮಂಗಳವಾರ ರಾಜಸ್ಥಾನದ 21 ಜಿಲ್ಲೆಗಳಾದ್ಯಂತ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಅದು ಮೂರು ಸ್ಥಳೀಯ ಸಂಸ್ಥೆಗಳನ್ನು ಗೆದ್ದುಕೊಂಡಿದೆ.

 ಆರು ಜಿಲ್ಲಾ ಪರಿಷದ್ ಸ್ಥಾನಗಳ ಪೈಕಿ ನಾಲ್ಕನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿದ್ದರೆ, ತಲಾ ಒಂದು ಸ್ಥಾನ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯ ಪಾಲಾಗಿವೆ. 21 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಕಾಂಗ್ರೆಸ್ 12ರಲ್ಲಿ ಮತ್ತು ಬಿಜೆಪಿ ಎಂಟರಲ್ಲಿ ಗೆದ್ದಿದ್ದರೆ, ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಆರು ನಗರ ಪಾಲಿಕೆ/ನಗರ ಪರಿಷದ್ ಸ್ಥಾನಗಳ ಪೈಕಿ ಕಾಂಗ್ರೆಸ್ ನಾಲ್ಕರಲ್ಲಿ ಮತ್ತು ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಒಂದು ತಿಂಗಳ ಹಿಂದೆ ರಾಜ್ಯದಲ್ಲಿಯ ಎರಡು ಲೋಕಸಭಾ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News