ಫೋರ್ಬ್ಸ್ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿರುವ 8 ಭಾರತೀಯ ಮಹಿಳೆಯರು ಯಾರು ಗೊತ್ತಾ?

Update: 2018-03-07 15:49 GMT

ಹೊಸದಿಲ್ಲಿ, ಮಾ.7: ಫೋರ್ಬ್ಸ್ 2018ರ ವಿಶ್ವ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಭಾರತದ ಎಂಟು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ 256 ಮಹಿಳೆಯರನ್ನು ಹೊಂದಿರುವ ಈ ಪಟ್ಟಿಯಲ್ಲಿ ಬಹುತೇಕ ಸ್ತ್ರೀಯರು ತಮ್ಮ ಕುಟುಂಬದ ವ್ಯವಹಾರವನ್ನೇ ನೆಚ್ಚಿಕೊಂಡಿದ್ದರೂ 72 ಮಹಿಳೆಯರು ಸ್ವಯಾರ್ಜಿತ ಆಸ್ತಿಯಿಂದಾಗಿ ಈ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದಾರೆ ಎಂದು ಫೋರ್ಬ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಮಹಿಳೆಯರ ಪೈಕಿ ಸಾವಿತ್ರಿ ಜಿಂದಾಲ್ ಪ್ರಥಮ ಸ್ಥಾನದಲ್ಲಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ 8.8 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 176ನೇ ಸ್ಥಾನದಲ್ಲಿದ್ದಾರೆ. ಇನ್ನು ಬಯೋಕಾನ್ ಸಂಸ್ಥೆ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ ಎರಡನೇ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದಾರೆ. ಅವರು 3.6 ಬಿಲಿಯನ್ ಡಾಲರ್‌ನೊಂದಿಗೆ 629ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಯೋಕಾನ್ ಸಂಸ್ಥೆ ಔಷಧಿಗಳನ್ನು ತಯಾರಿಸುವ ಭಾರತದ ಪ್ರತಿಷ್ಟಿತ ಸಂಸ್ಥೆಯಾಗಿದ್ದು ಕ್ಯಾನ್ಸರ್, ಮಧುಮೇಹ ಮುಂತಾದ ಗಂಭೀರ ಕಾಯಿಲೆಗಳಿಗೆ ಔಷಧಿ ತಯಾರಿಸುತ್ತದೆ. ಗೋದ್ರೇಜ್ ಕುಟುಂಬದ ಲೀನಾ ಕೃಷ್ಣ ಗೋದ್ರೇಜ್ ಮೂರನೇ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದಾರೆ. 2.9 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ಆಕೆ ಫೋರ್ಬ್ಸ್ ಪಟ್ಟಿಯಲ್ಲಿ 822ನೇ ಸ್ಥಾನದಲ್ಲಿದ್ದಾರೆ. ಮತ್ತೊಂದು ಔಷಧಿ ತಯಾರಿಕಾ ಸಂಸ್ಥೆ ಯುಎಸ್‌ವಿಯ ಮುಖ್ಯಸ್ಥೆ ಲೀನಾ ತೆವಾರಿ 2.4 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಭಾರತದ ನಾಲ್ಕನೇ ಮತ್ತು ವಿಶ್ವದ 1,20ನೇ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ತಾಯಿ ಮತ್ತು ಮಗನಾಗಿರುವ ವಿನೋದ್ ಮತ್ತು ಅನಿಲ್ ರೈ ಗುಪ್ತಾ, ಹೆವೆಲ್ಸ್ ಇಂಡಿಯಾದಲ್ಲಿ ಶೇ. 43 ಪಾಲುದಾರರಾಗಿದ್ದು, 2.2 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಈ ಜೋಡಿ ಭಾರತದ ಐದನೇ ಮತ್ತು ವಿಶ್ವದ 1,103ನೇ ಅತ್ಯಂತ ಶ್ರೀಮಂತರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಇಂಜಿನಿಯರಿಂಗ್ ಸಂಸ್ಥೆ ಥರ್ಮ್ಯಾಕ್ಸ್‌ನಲ್ಲಿ ಶೇ.62 ಪಾಲುದಾರಿಕೆ ಹೊಂದಿರುವ ಅನು ಅಗಾ ಎರಡು ವರ್ಷಗಳ ನಂತರ ಮತ್ತೊಮ್ಮೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, 1,650ನೇ ಸ್ಥಾನದಲ್ಲಿದ್ದಾರೆ. 1.4 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಆಕೆ ಭಾರತದ ಆರನೇ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. 1971ರಲ್ಲಿ ಶೀಲಾ ಫೋಮ್ ಸಂಸ್ಥೆಯನ್ನು ಹುಟ್ಟುಹಾಕಿ ಸ್ಲೀಪ್‌ವೆಲ್ ಬ್ರಾಂಡ್‌ನ ಹಾಸಿಗೆಗಳನ್ನು ನಿರ್ಮಿಸುತ್ತಿರುವ ಶೀಲಾ ಗೌತಮ್ ಫೋರ್ಬ್ಸ್ ಪಟ್ಟಿಯಲ್ಲಿ 1999ನೇ ಸ್ಥಾನದಲ್ಲಿದ್ದಾರೆ. 1.1 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಆಕೆ ಭಾರತದ ಏಳನೇ ಶ್ರೀಮಂತ ಮಹಿಳೆ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಶೀಲಾ ಜೊತೆಗೆ ಯೆಸ್ ಬ್ಯಾಂಕ್‌ನಲ್ಲಿ ಶೇ. 9.3 ಪಾಲುದಾರಿಕೆ ಹೊಂದಿರುವ ಮಧು ಕಪೂರ್ ಈ ಪಟ್ಟಿಯಲ್ಲಿ ಹೊಸ ಪರಿಚಯವಾಗಿದ್ದು, 1.1 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 1999ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಜಾಗತಿಕವಾಗಿ ವಾಲ್ಮಾರ್ಟ್‌ನ ಸಂಸ್ಥಾಪಕ ಸ್ಯಾಮ್ ವಾಲ್ಟನ್‌ನ ಏಕಮಾತ್ರ ಪುತ್ರಿ ಅಲಿಸ್ ವಲ್ಟನ್ 46 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಲೋರಿಯಲ್ ಸಂಸ್ಥೆಯಲ್ಲಿ ಶೇ. 33 ಪಾಲುದಾರಿಕೆ ಹೊಂದಿರುವ ಫ್ರಾನ್ಕೊಯಿಸ್ ಬೆಟೆನ್‌ಕೋರ್ಟ್ ಮೆಯೆರ್ಸ್ ಮತ್ತು ಕುಟುಂಬ 42.2 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಬಿಎಂಡಬ್ಲೂ ವಾಹನ ತಯಾರಿಕಾ ಸಂಸ್ಥೆಯಲ್ಲಿ ಶೇ. 19.2% ಪಾಲುದಾರಿಕೆ ಹೊಂದಿರುವ ಜರ್ಮನಿಯ ಸುಸೇನ್ ಕ್ಲೇಟನ್ ಜಗತ್ತಿನ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಆಕೆ 25 ಬಿಲಿಯನ್ ಡಾಲರ್ ಆಸ್ತಿಯ ಒಡತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News