ಮಾಣಿಕ್ ಸರ್ಕಾರ್ ನಿವಾಸಕ್ಕೆ ತೆರಳಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ

Update: 2018-03-09 04:35 GMT

ಅಗರ್ತಲ, ಮಾ. 9: ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ ಮಾಣಿಕ್ ಸರ್ಕಾರ್ ಅವರಿಗೆ ಗುರುವಾರ ಸಂಜೆ ಅಚ್ಚರಿ ಕಾದಿತ್ತು. ಹಿರಿಯ ಬಿಜೆಪಿ ಮುಖಂಡ ರಾಮ್‌ಮಾಧವ್ ಹಾಗೂ ಚುನಾಯಿತ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸಿಪಿಎಂ ಕಚೇರಿಗೆ ಭೇಟಿ ನೀಡಿ, ದೇಬ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಿದರು.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಧಿಕೃತ ನಿವಾಸ ತೆರವುಗೊಳಿಸಿ, ಸಿಪಿಎಂ ಕಚೇರಿಯ ಮೇಲಿದ್ದ ಎರಡು ಕೊಠಡಿಯ ಫ್ಲಾಟ್‌ಗೆ ಸ್ಥಳಾಂತರಗೊಂಡ ಮಾಣಿಕ್ ಸರ್ಕಾರ್ ಅವರ ಹೊಸ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರು ಶುಕ್ರವಾರ ನಡೆಯುವ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು.

ಪಕ್ಷದ ಕಾರ್ಯಕರ್ತರ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾರಂಭವನ್ನು ಬಹಿಷ್ಕರಿಸಲು ಸಿಪಿಎಂ ಮುಖಂಡರು ಯೋಚಿಸಿದ್ದರು. ಇದೀಗ ಹೊಸ ಬೆಳವಣಿಗೆ ಬಳಿಕ ಸಿಪಿಎಂ ಮುಖಂಡರ ನಡೆ ಕಾದು ನೋಡಬೇಕಾಗಿದೆ.

ಮಾಜಿ ಸಿಎಂ ನಿವಾಸದಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್‌ಮಾಧವ್, "ಸರ್ಕಾರ್ ಆಹ್ವಾನ ಸ್ವೀಕರಿಸಿದ್ದಾರೆ" ಎಂದು ಹೇಳಿದರು. ಇದಾದ ತಕ್ಷಣ ಸರ್ಕಾರ್ ಅವರ ಗುಣಗಾನ ಮಾಡಿ, ಬಿಜೆಪಿ ಮುಖಂಡ ಟ್ವೀಟ್ ಮಾಡಿದರು.

"ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ತಕ್ಷಣ ತಮ್ಮ ವಾಸ್ತವ್ಯವನ್ನು ಪಕ್ಷದ ಕಚೇರಿಗೆ ಸ್ಥಳಾಂತರಿಸಿದರು. ಇದು ಎಲ್ಲ ಮುಖಂಡ ರಿಗೂ ಅನುಕರಣೀಯ" ಆದರೆ  ಬಿಜೆಪಿ ಮುಖಂಡರು ಚುನಾವಣೆ ವೇಳೆ ಸರ್ಕಾರ್ ಅವರನ್ನು ಗುರಿ ಮಾಡಿ ವ್ಯಾಪಕ ಅಪಪ್ರಚಾರ ನಡೆಸಿದ್ದರು. ಸರ್ಕಾರ್ ಅವರನ್ನು ಭ್ರಷ್ಟ ಹಾಗೂ ಹಿಂಸಾತ್ಮಕ ವ್ಯಕ್ತಿ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News