ಮತ್ತೊಮ್ಮೆ ನೆನಪಾದ ಅರುಣಾ ಶಾನುಬಾಗ್

Update: 2018-03-09 15:24 GMT

ಹೊಸದಿಲ್ಲಿ, ಮಾ.9: ಪರೋಕ್ಷ ದಯಾಮರಣಕ್ಕೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡುವ ಮೂಲಕ 42 ವರ್ಷಗಳ ಕಾಲ ಕೆಇಎಂ ಆಸ್ಪತ್ರೆಯ ನಾಲ್ಕನೇ ವಾರ್ಡ್‌ನ ಹಾಸಿಗೆಯಲ್ಲಿ ಜೀವಚ್ಛವದಂತೆ ಬಿದ್ದಿದ್ದ ಅದೇ ಆಸ್ಪತ್ರೆಯ ನರ್ಸ್ ಅರುಣಾ ರಾಮಚಂದ್ರ ಶಾನುಬಾಗ್ ಮತ್ತೊಮ್ಮೆ ನೆನಪಾಗಿದ್ದಾರೆ. 1973ರ ನವೆಂಬರ್ 27ರಂದು ಅರುಣಾ ಶಾನುಬೋಗ್ ಕರ್ತವ್ಯ ಮುಗಿಸಿ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಆಸ್ಪತ್ರೆಯ ವಾರ್ಡ್ ಬಾಯ್ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ. ಆಕೆಯ ಕುತ್ತಿಗೆ ಮತ್ತು ದೇಹಕ್ಕೆ ನಾಯಿ ಕಟ್ಟುವ ಸರಪಳಿಯನ್ನು ಬಿಗಿಯಲಾಗಿತ್ತು. ಮರುದಿನ ಬೆಳಿಗ್ಗೆ ಅರುಣಾ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು. ಆಕೆಯ ಕುತ್ತಿಗೆಗೆ ಸುತ್ತಿದ್ದ ಸರಪಳಿ ಎಂಟು ಗಂಟೆಗಳ ಕಾಲ ಆಕೆಯ ಮೆದುಳಿಗೆ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಕರ್ನಾಟಕದವರಾದ ಅರುಣಾ ಶಾನುಬೋಗ್ ನರ್ಸಿಂಗ್ ಕಲಿಯುವ ಉದ್ದೇಶದಿಂದ ಮುಂಬೈಗೆ ತೆರಳಿದ್ದರು. ಈ ಘಟನೆ ನಡೆದ ಸಮಯದಲ್ಲಿ ಅರುಣಾ ನಿಶ್ಚಿತಾರ್ಥವು ಅದೇ ಆಸ್ಪತ್ರೆಯ ಒಬ್ಬ ವೈದ್ಯರ ಜೊತೆ ನಡೆದಿತ್ತು. ಅವರ ವಿವಾಹವು ಶೀಘ್ರದಲ್ಲೇ ನಡೆಯಲಿತ್ತು. ಮೆದುಳಿನ ನರ ಮತ್ತು ಕುತ್ತಿಗೆಯ ಬಳ್ಳಿ ಗಂಭೀರವಾಗಿ ಹಾನಿಗೀಡಾಗಿದ್ದ ಪರಿಣಾಮ ಅರುಣಾ ಮುಂದಿನ ನಾಲ್ಕು ದಶಕಗಳ ಕಾಲ ಕೋಮಕ್ಕೆ ತೆರಳಿದರು. ಕೆಇಎಂ ಆಸ್ಪತ್ರೆಯ ಆಕೆಯ ಸಹೋದ್ಯೋಗಿಗಳು ಮತ್ತು ಇತರ ನರ್ಸ್‌ಗಳು ಆಕೆ ಸಾಯದಂತೆ ನೋಡಿಕೊಂಡರು. ಪ್ರತಿದಿನ ಆಕೆಯ ಭೋಜನವನ್ನು ನೀಡಿ ಸ್ವಚ್ಛವಾಗಿಡುತ್ತಿದ್ದರು. ನಲ್ವತ್ತು ವರ್ಷಗಳಲ್ಲಿ ಅರುಣಾ ದೇಹದಲ್ಲಿ ಒಂದು ಕೂಡಾ ಹುಣ್ಣಾಗದಿರುವುದು ಅಲ್ಲಿನ ನರ್ಸ್‌ಗಳ ಕಾಳಜಿಗೆ ಸಾಕ್ಷಿಯಾಗಿತ್ತು. ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಸೊಹನ್‌ಲಾಲ್ ವಾಲ್ಮಿಕಿಗೆ ಕಳ್ಳತನ ಮತ್ತು ಹಲ್ಲೆ ಪ್ರಕರಣದಲ್ಲಿ ತಲಾ ಏಳು ವರ್ಷಗಳ ಕಾರಾಗೃಹ ಶಿಕ್ಷೆ ನೀಡಲಾದರೂ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಲಿಲ್ಲ. ಅರುಣಾರ ಪ್ರಕರಣವನ್ನು ಗಮನಿಸುತ್ತಿದ್ದ ಪತ್ರಕರ್ತೆ ಮತ್ತು ಲೇಖಕಿ ಪಿಂಕಿ ವಿರಾನಿ ಆಕೆಗೆ ಪರೋಕ್ಷ ದಯಾಮರಣ ನೀಡಬೇಕೆಂದು 2009ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಅರುಣಾ 1973ರ ನವೆಂಬರ್ 27ರಂದೇ ಸತ್ತಿದ್ದಾರೆ ಎಂದು ಆಕೆ ವಾದಿಸಿದ್ದರು. ಆದರೆ ಆಕೆಯ ಮನವಿಗೆ ಕೆಇಎಂ ಆಸ್ಪತ್ರೆಯ ನರ್ಸ್‌ಗಳು ವಿರೋಧ ವ್ಯಕ್ತಪಡಿಸಿದ್ದರು.

2011ರಲ್ಲಿ ವಿರಾನಿಯ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿ ಮನಸ್ಸು ಬದಲಾಯಿಸಲು ಇಚ್ಛಿಸಿದರೆ ಬಾಂಬೆ ಉಚ್ಚ ನ್ಯಾಯಾಲಯದ ಅನುಮತಿಯೊಂದಿಗೆ ಅರುಣಾಗೆ ನೀಡಿರುವ ಜೀವಕಾರಕ ಸೌಲಭ್ಯಗಳನ್ನು ನಿಲ್ಲಿಸಬಹುದು ಎಂದು ತಿಳಿಸಿತ್ತು. 2015ರ ಮೇ 15ರಂದು ತೀವ್ರ ನ್ಯುಮೋನಿಯ ಜ್ವರಕ್ಕೆ ತುತ್ತಾಗಿ ಅರುಣಾ ಕೊನೆಯುಸಿರೆಳೆದಿದ್ದರು. ಅರುಣಾ ಶಾನುಬೋಗ್ ಪ್ರಕರಣವು ಪರಿವರ್ತಿಸಲಾಗದ ಕೋಮ ಸ್ಥಿತಿಗೆ ತಲುಪುವ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕಿನ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತು. 2011ರಲ್ಲಿ ಸರ್ವೋಚ್ಚ ನ್ಯಾಯಾಲಯವು ಮೊತ್ತಮೊದಲ ಬಾರಿ ಪರೋಕ್ಷ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ತಿಳಿಸಿತು. ಪರೋಕ್ಷ ದಯಾಮರಣದಲ್ಲಿ ರೋಗಿಗೆ ನೀಡಲಾಗಿರುವ ಜೀವಕಾರಕ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತದೆ. ಆದರೆ ಪ್ರತ್ಯಕ್ಷ ದಯಾಮರಣದಲ್ಲಿ ವಿಷಯುಕ್ತ ಸೂಜಿ ಚುಚ್ಚುವ ಮೂಲಕ ರೋಗಿಯನ್ನು ಸಾಯಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News