ದೇಶವನ್ನು ತಿರೋಗಾಮಿ ದೃಷ್ಟಿಕೋನದಿಂದ ನಡೆಸಲಾಗುತ್ತಿದೆ: ಮೋದಿ ಸರಕಾರಕ್ಕೆ ಸೋನಿಯಾ ತರಾಟೆ

Update: 2018-03-09 15:50 GMT

ಹೊಸದಿಲ್ಲಿ, ಮಾ.9: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಶುಕ್ರವಾರದಂದು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸರಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ‘ಇಂಡಿಯಾ ಟುಡೆ’ ಸಮಾವೇಶ 2018ರಲ್ಲಿ ಮುಖ್ಯ ಭಾಷಣ ಮಾಡಿದ ಸೋನಿಯಾ, ನಮ್ಮ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಇಂದು ನಾವು ತಿರೋಗಾಮಿ ದೃಷ್ಟಿಕೋನವನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಯಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಬಿಜೆಪಿ ಸರಕಾರವೇ ಹೊಣೆ ಎಂದು ತಿಳಿಸಿದ ಕಾಂಗ್ರೆಸ್ ನಾಯಕಿ, ಭಯ ಮತ್ತು ಬೆದರಿಕೆ ಇಂದು ದಿನನಿತ್ಯದ ವಿಷಯವಾಗಿದೆ. ಪರ್ಯಾಯ ಧ್ವನಿಗಳನ್ನು ಉಡುಗಿಸಲಾಗುತ್ತಿದೆ. ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸಲಾಗುತ್ತಿದೆ, ಪರ್ಯಾಯ ಸೇನೆಗಳು ಕಾರ್ಯಾಚರಿಸಲು ಸರಕಾರವೇ ಪ್ರೋತ್ಸಾಹ ನೀಡುತ್ತಿದೆ, ಚುನಾವಣೆಯನ್ನು ಗೆಲ್ಲುವ ದೃಷ್ಟಿಯಿಂದ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೇಶವು ಬಂಡಾಯದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಿಳಿಸಿದ ಸೋನಿಯಾ, ನರೇಂದ್ರ ಮೋದಿ ಸರಕಾರವು ಸಂಸತ್‌ನಲ್ಲಿರುವ ಬಹುಮತದ ನೆಪದಲ್ಲಿ ವಿರೋಧಪಕ್ಷಗಳ ಧ್ವನಿಯನ್ನು ಉಡುಗಿಸುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮನ್ನು ಸಂಸತ್‌ನಲ್ಲಿ ಮಾತಾಡಲು ಬಿಡದಿದ್ದರೆ ಸಂಸತ್‌ನ್ನು ಮುಚ್ಚಲಿ. ಅದರಿಂದ ನಾವೆಲ್ಲರೂ ಮನೆಗೆ ತೆರಳಬಹುದು.

ವಾಜಪೇಯಿ ಸರಕಾರದಂತಲ್ಲದೆ ಇಂದಿನ ಬಿಜೆಪಿ ಸರಕಾರ ಸಂಸದೀಯ ಪ್ರಕ್ರಿಯೆಗಳಿಗೆ ಗೌರವ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. 2014ರ ಮೇ 26ಕ್ಕೂ ಮೊದಲು ಭಾರತವು ಕೇವಲ ಒಂದು ಕಗ್ಗತ್ತಲ ದೇಶವಾಗಿತ್ತೇ?, ಕೇವಲ ಈ ನಾಲ್ಕು ವರ್ಷಗಳಲ್ಲಿ ಮಾತ್ರ ಭಾರತವು ಅಭಿವೃದ್ಧಿ, ಏಳಿಗೆ ಮತ್ತು ಔನತ್ಯವನ್ನು ಪಡೆದುಕೊಂಡಿತೇ?, ಇಂತಹ ಹೇಳಿಕೆಗಳು ನಮ್ಮ ಜನರ ಬುದ್ಧಿವಂತಿಕೆಗೆ ಮಾಡಿದ ಅವಮಾನವಲ್ಲೇ? ಎಂದು ಸೋನಿಯಾ ಪ್ರಶ್ನಿಸಿದ್ದಾರೆ. ಇಂದು ನ್ಯಾಯಾಂಗವು ಸಂಕಷ್ಟದಲ್ಲಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಪಾರದರ್ಶಕತೆ ತರಲು ಜಾರಿಗೆ ತರಲಾಯಿತು. ಆದರೆ ಇಂದು ಆ ಕಾನೂನು ಶೈತ್ಯಾಗಾರದಲ್ಲಿದೆ. ಆಧಾರ್ ಅನ್ನು ನಿಯಂತ್ರಣ ಸಾಧಿಸಲು ಸಾಧನವೆಂಬತೆ ಬಳಸಲಾಗುತ್ತಿದೆ ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News