ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದ ರಾಹುಲ್-ಇತಿಹಾಸ ಶಿಕ್ಷಕನ ಚರ್ಚೆ

Update: 2018-03-09 16:39 GMT

ಹೊಸದಿಲ್ಲಿ, ಮಾ.9: “ಭಾರತದ ಆರ್ಥಿಕತೆಗೆ ನಿಮ್ಮ ಕುಟುಂಬದ ಕಾಣಿಕೆ ಏನು” ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಉತ್ತರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಬ್ಬರ ನಡುವಿನ ಮಾತುಕತೆಯನ್ನು ಪರ ಮತ್ತು ವಿರೋಧಿಗಳು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಸಿಂಗಾಪುರದಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ ಆರ್ಥಿಕ ಇತಿಹಾಸದ ಶಿಕ್ಷಕ ಮತ್ತು ಏಷ್ಯಾ ರಿಬಾರ್ನ್ ಎಂಬ ಪುಸ್ತಕದ ಲೇಖಕ ಎಂದು ತಮ್ಮನ್ನು ಪರಿಚಯಿಸಿಕೊಂಡ ಪಿ.ಕೆ ಬಸು ಎಂಬವರು, “ನಿಮ್ಮ ಕುಟುಂಬವು ಅಧಿಕಾರದಲ್ಲಿದ್ದಾಗ ಭಾರತದ ತಲಾ ಆದಾಯ ಜಗತ್ತಿನ ಸರಾಸರಿಗಿಂತ ನಿಧಾನವಾಗಿ ಹೆಚ್ಚಾಗುತ್ತಿತ್ತು. ಆದರೆ ನಿಮ್ಮ ಕುಟುಂಬ ಪ್ರಧಾನಿ ಪಟ್ಟದಿಂದ ಕೆಳಗಿಳಿದ ನಂತರ ಭಾರತದ ತಲಾ ಆದಾಯವು ಜಗತ್ತಿನ ಸರಾಸರಿಗಿಂತ ವೇಗವಾಗಿ ವೃದ್ಧಿಯಾಗುತ್ತಿದೆ. ಇದ್ಯಾಕೆ ಹೀಗೆ?” ಎಂದು ಪ್ರಶ್ನಿಸಿದರು. ಇದಕ್ಕೆ ಮರುಪ್ರಶ್ನಿಸಿದ ರಾಹುಲ್, “ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಬಸು ಬಳಿ ಕೇಳಿದರು. ಇದಕ್ಕುತ್ತರವಾಗಿ ಬಸು, “ನಾನು ಪ್ರಶ್ನೆ ಕೇಳಿದ್ದೇನೆ. ನಾನಿಲ್ಲಿ ಬಂದಿರುವುದು ಪ್ರಶ್ನಿಸಲು. ನನ್ನ ಅನಿಸಿಕೆ ನಾನು ಬರೆದ ಪುಸ್ತಕದಲ್ಲಿದೆ. ಅದನ್ನು ಓದಿ” ಎಂದು ತಿಳಿಸಿದರು. ಬಸು ಉತ್ತರಕ್ಕೆ ಪ್ರೇಕ್ಷಕರು ಕೂಡಾ ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿ ಸೂಚಿಸಿದರು. ಆ ಪ್ರಶ್ನೆಯನ್ನು ನಿರ್ಲಕ್ಷಿಸುವಂತೆ ನಿರೂಪಕರು ತಿಳಿಸಿದರೂ ಅದಕ್ಕೊಪ್ಪದ ರಾಹುಲ್, “ನೀವು ಒಂದು ಕುಟುಂಬಕ್ಕೆ ಬಹಳಷ್ಟು ಅಧಿಕಾರ ಕೊಡುತ್ತಿದ್ದೀರಿ” ಎಂದು ತಿಳಿಸಿದರು. ಆದರೂ ಈ ವಾದ ಮುಂದುವರಿದಾಗ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ, “ಹಾಗಾದರೆ ನೀವು 2004ರಿಂದ ಇಲ್ಲಿಯವರೆಗೆ ಭಾರತೀಯ ರಾಜಕೀಯದಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದು ಹೇಳುತ್ತಿದ್ದೀರಾ?, ನೀವು ಹಾಗೆ ಹೇಳುತ್ತಿದ್ದೀರಿ ತಾನೆ?, ನಿಮ್ಮ ಮನಸ್ಸನ್ನು ಮೊದಲು ಸ್ಪಷ್ಟ ಮಾಡಿಕೊಳ್ಳಿ. ಒಂದೋ ನನ್ನ ಪಾತ್ರವಿದೆ ಅಥವಾ ಇಲ್ಲ. ಎರಡೂ ಆಗಿರಲು ಸಾಧ್ಯವಿಲ್ಲ” ಎಂದು ಉತ್ತರಿಸಿದಾಗ ಪ್ರೇಕ್ಷಕರು ರಾಹುಲ್ ವಾದವನ್ನು ಒಪ್ಪಿ ಚಪ್ಪಾಳೆ ಬಾರಿಸಿದರು. “ನೀವು ಹೀಗೆ ನನ್ನಲ್ಲಿ ಕೇಳಿದ್ದನ್ನು ಪ್ರಧಾನಿ ಮೋದಿ ಮುಂದೆ ಕೇಳಲು ಸಾಧ್ಯವಿಲ್ಲ. ನಿಮಗೆ ಅವರ ಮುಂದೆ ಕೇಳುವ ಧೈರ್ಯವೇ ಇರುವುದಿಲ್ಲ. ಆದರೆ ನಾನು ಉತ್ತರಿಸಿದ್ದೇನೆ ಮತ್ತು ಅದಕ್ಕಾಗಿ ನಾನು ಬಹಳ ಹೆಮ್ಮೆ ವ್ಯಕ್ತಪಡಿಸುತ್ತೇನೆ” ಎಂದು ರಾಹುಲ್ ಗಾಂಧಿ ತಿಳಿಸಿದರು. ನಂತರ ಮಾತನಾಡಿದ ರಾಹುಲ್ ಗಾಂಧಿ, “ಈ ವಾದವು ಯಾವ ರೀತಿಯ ಧ್ರುವೀಕರಣ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕೋಣೆಯಲ್ಲಿರುವ ಯಾರಿಗಾದರೂ ದೇಶದ ಈ ಯಶಸ್ಸಿನಲ್ಲಿ ಕಾಂಗ್ರೆಸ್ ಪಾತ್ರವಿಲ್ಲ ಎಂದೆನಿಸಿದರೆ, ಸ್ವಾತಂತ್ರ್ಯಗಳಿಸಿರುವುದು ಆ ಯಶಸ್ಸಿನ ಭಾಗವಲ್ಲ, ಹಸಿರುಕ್ರಾಂತಿ ಆ ಯಶಸ್ಸಿನ ಭಾಗವಲ್ಲ, ದೂರಸಂಪರ್ಕ ಆ ಯಶಸ್ಸಿನ ಭಾಗವಲ್ಲ ಎಂದೆನಿಸಿದರೆ. ಯಾರಿಗಾದರೂ ಜಾಗತೀಕರಣ ಆ ಯಶಸ್ಸಿನ ಭಾಗವಲ್ಲ ಎಂದು ಅನಿಸಿದರೆ ಅಂಥವರು ಹೊಸ ಪುಸ್ತಕವನ್ನೇ ಬರೆಯಬೇಕು ಎಂದು ತಿಳಿಸಿದರು. ಈ ಇಡೀ ಮಾತುಕತೆಯು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಂತರ ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್, ರಾಜಕೀಯ ಹೇಳಿಕೆಗಳು ಪ್ರತಿದಿನ ಹೊಸ ಕೆಳಮಟ್ಟವನ್ನು ತಲುಪುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ವಿರೋಧಿಗಳನ್ನು ನಯವಾಗಿ ಎದುರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News