ಗಾಡಿಕೊಪ್ಪ : ಎಲ್ಲೆಂದರಲ್ಲಿ ಘನತ್ಯಾಜ್ಯ ವಿಲೇವಾರಿ

Update: 2018-03-09 18:01 GMT

ಶಿವಮೊಗ್ಗ,ಮಾ.9: ಇತ್ತೀಚೆಗಷ್ಟೆ ನಗರದ ಗೋಪಾಳಗೌಡ ಬಡಾವಣೆಯಲ್ಲಿರುವ ಕಸ ವಿಲೇವಾರಿ ಕೇಂದ್ರದಲ್ಲಿ ಅಸಮರ್ಪಕ ನಿರ್ವಹಣೆಯಿಂದ ಪ್ಲ್ಯಾಸ್ಟಿಕ್ - ಪೇಪರ್ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದ ಬೆನ್ನಲ್ಲೆ, ನಗರದ ಹೊರವಲಯ ಗಾಡಿಕೊಪ್ಪದಲ್ಲಿಯೂ ಎಲ್ಲೆಂದರಲ್ಲಿ ಹಾಕುತ್ತಿರುವ ಘನತ್ಯಾಜ್ಯವು ಸ್ಥಳೀಯ ಜಾನುವಾರುಗಳ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸಿರುವ ಸಂಗತಿ ಬೆಳಕಿಗೆ ಬಂದಿದೆ. 

ಕಳೆದ ಕೆಲ ತಿಂಗಳಿನಿಂದ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜು ಸಮೀಪದಲ್ಲಿ ಹಾದು ಹೋಗಿರುವ ತುಂಗಾ ಮೇಲ್ದಂಡೆ ನಾಲೆಯ ಬಳಿ, ಪಾಲಿಕೆಯ ವಾಹನಗಳು ವಿವಿಧೆಡೆ ಸಂಗ್ರಹಿಸಿ ತರುವ ಘನತ್ಯಾಜ್ಯ ವಿಲೇವಾರಿ ಮಾಡಿ ಹೋಗುತ್ತಿವೆ. ಈ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಪೇಪರ್ ಮತ್ತೀತರ ವಸ್ತುಗಳನ್ನು ಹಸು, ಎಮ್ಮೆಗಳು ತಿನ್ನುತ್ತಿವೆ. ಇದರಿಂದ ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ. 

'ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ವಿಲೇವಾರಿ ಮಾಡಬೇಕು. ಆದರೆ ಕೆಲ ವಾಹನ ಚಾಲಕರು ಘನತ್ಯಾಜ್ಯವನ್ನು ನಮ್ಮ ಗ್ರಾಮದ ತುಂಗಾ ಮೇಲ್ದಂಡೆ ನಾಲೆಯ ಸುತ್ತಮುತ್ತಲು ಹಾಕುತ್ತಿದ್ದಾರೆ. ಇದರಿಂದ ಇಲ್ಲಿನ ಪರಿಸರ ಮಲೀನವಾಗುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಗ್ರಾಮದಲ್ಲಿರುವ ನೂರಾರು ಜಾನುವಾರುಗಳು ಪ್ಲ್ಯಾಸ್ಟಿಕ್, ಪೇಪರ್ ಮತ್ತೀತರ ಕಸಕಡ್ಡಿ ತಿನ್ನುತ್ತಿವೆ. ಜಾನುವಾರುಗಳು ಮಾರಾಣಾಂತಿಕ ಸಮಸ್ಯೆ ಎದುರಿಸುತ್ತಿವೆ. ಈಗಾಗಲೇ ಹಲವು ಜಾನುವಾರುಗಳು ಮೃತಪಟ್ಟಿವೆ. ಇದಕ್ಕೆ ಪ್ಲಾಸ್ಟಿಕ್, ಪೇಪರ್ ಮತ್ತೀತರ ಕಸಕಡ್ಡಿ ಸೇವನೆಯೇ ಮುಖ್ಯ ಕಾರಣವಾಗಿದೆ.  ಇಷ್ಟೆಲ್ಲ ಅವಾಂತರ ಘನತ್ಯಾಜ್ಯದಿಂದ ಉಂಟಾಗುತ್ತಿದೆ. ಈಗಾಗಲೇ ಕಸ ವಿಲೇವಾರಿ ಮಾಡುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕದಂತೆ ಹೇಳಿದರೆ, ನಮ್ಮಗಳೊಂದಿಗೆ ಜಗಳಕ್ಕಿಳಿಯುತ್ತಾರೆ. ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ. ತಕ್ಷಣವೇ ಪಾಲಿಕೆ ಆಡಳಿತ ಅವ್ಯವಸ್ಥಿತವಾಗಿ ಘನತ್ಯಾಜ್ಯ ವಿಲೇವಾರಿ  ಮಾಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು' ಎಂದು ಗಾಡಿಕೊಪ್ಪದ ನಿವಾಸಿ ಮಂಜುನಾಥ್ ಎಂಬುವರು ಆಗ್ರಹಿಸುತ್ತಾರೆ. 

ಕ್ರಮಕೈಗೊಳ್ಳಲಿ: ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಘಟಕಗಳಿದ್ದು, ಈ ಸ್ಥಳಗಳಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡಬೇಕು. ಆದರೆ ಮನೆಗಳಿಂದ ಸಂಗ್ರಹಿಸುವ ತ್ಯಾಜ್ಯವನ್ನು ಕೆಲ ವಾಹನ ಚಾಲಕರು ಸಾರ್ವಜನಿಕ ಸ್ಥಳಗಳಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಪರಿಸರ ಮಲೀನಗೊಳ್ಳುವುದರ ಜೊತೆಗೆ, ಸಾರ್ವಜನಿಕರ ಅನಾರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಇನ್ನಾದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕು. ಅವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ಮಾಡುವತ್ತ ಗಮನಹರಿಸಬೇಕು. ಎಲ್ಲೆಂದರಲ್ಲಿ ಕಸ ಹಾಕುವ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. 

'ಪ್ಲಾಸ್ಟಿಕ್ ಸೇವಿಸಿ ಸಾಯುತ್ತಿರುವ ಜಾನುವಾರುಗಳು'
ಗಾಡಿಕೊಪ್ಪ ಗ್ರಾಮದ ತುಂಗಾ ನಾಲೆಯ ಸಮೀಪ ಹಾಕುತ್ತಿರುವ ಘನತ್ಯಾಜ್ಯದಲ್ಲಿನ ಪ್ಲಾಸ್ಟಿಕ್, ಪೇಪರ್ ಮತ್ತೀತರ ತ್ಯಾಜ್ಯ ವಸ್ತುಗಳನ್ನು ಸೇವಿಸಿ ಈಗಾಗಲೇ ಗ್ರಾಮದ ಹಲವು ಜಾನುವಾರುಗಳು ಮೃತಪಟ್ಟಿವೆ. ಮತ್ತೆ ಕೆಲ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿ, ಸಾಯುವ ಸ್ಥಿತಿಯಲ್ಲಿವೆ. ತಕ್ಷಣವೇ ಮಹಾನಗರ ಪಾಲಿಕೆ ಆಡಳಿತವು ಈ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆ ಆಡಳಿತದ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಗಾಡಿಕೊಪ್ಪದ ನಿವಾಸಿ ಮಂಜುನಾಥ್‍ರವರು ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News