ನ್ಯಾ.ಲೋಯಾ ವಿಷಪ್ರಾಶನದಿಂದ ಸಾವಿಗೀಡಾಗಿರಬಹುದು: ಸುಪ್ರೀಂ ಕೋರ್ಟ್ ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್

Update: 2018-03-10 09:42 GMT

ಹೊಸದಿಲ್ಲಿ, ಮಾ.10: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್. ಲೋಯಾ ಅವರು ಉಸಿರುಗಟ್ಟಿದ ಅನುಭವವಾಗುತ್ತಿದೆ ಎಂದು ದೂರಿದ್ದರಿಂದ ಅವರು ವಿಷಪ್ರಾಶನದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಸೆಂಟರ್ ಫಾರ್ ಪಬ್ಲಿಕ್ ಲಿಟಿಗೇಶನ್ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಅಪೀಲು ಸಲ್ಲಿಸಿದೆ.

ಈ ವಿಚಾರವನ್ನು ಸಂಸ್ಥೆಯ ವಕೀಲ ಪ್ರಶಾಂತ್ ಭೂಷಣ್ ಶುಕ್ರವಾರದ ವಿಚಾರಣೆ ವೇಳೆ  ತಿಳಿಸಿದರು. ಲೋಯಾ ಅವರ ಇಜಿಜಿ ಹಾಗೂ ಹಿಸ್ಟೋ ಪೆಥಾಲಜಿ ವರದಿ ಅವರು ಹೃದಯಾಘಾತದಿಂದ ಸತ್ತಿಲ್ಲ ಎಂಬುದನ್ನು ತಿಳಿಸುತ್ತದೆ ಎಂದೂ ಅವರು ಹೇಳಿದರು. ಲೋಯಾ ಅವರ ವೈದ್ಯಕೀಯ ವರದಿಗಳನ್ನು ಫೋರೆನ್ಸಿಕ್ ತಜ್ಞರು ಹಾಗೂ ವೈದ್ಯರಿಗೆ ತೋರಿಸಲಾಗಿದ್ದು, ಅವರ್ಯಾರೂ ಹೃದಯಾಘಾತದ ಸೂಚನೆಯಿರಲಿಲ್ಲ ಎಂದಿದ್ದಾರೆ.

"ಲೋಯಾ ಅವರಿಗ ಹೃದಯಾಘಾತವಾಗಿದೆ ಎನ್ನುವ ಯಾವುದೇ ಸೂಚನೆ ಇಲ್ಲದೇ ಇರುವಾಗ ಅವರ ಜತೆಗಿದ್ದ ನ್ಯಾಯಾಧೀಶರು ಅವರಿಗೆ ಹೃದಯಾಘಾತವಾಗಿದೆ ಎಂದು ಹೇಗೆ ಹೇಳಿದರು'' ಎಂದು ಭೂಷಣ್ ಪ್ರಶ್ನಿಸಿದ್ದಾರೆ. "ಡಿಸೆಂಬರ್ 1, 2014ರ ಮುಂಜಾನೆ ಲೋಯಾ ಅವರು ಎದೆನೋವೆಂದು ಹೇಳಿದ್ದರು. ವಿಷಪ್ರಾಶನವಾದಾಗಲೂ ಎದೆ ಬಿಗಿತ ಹಾಗು ಹೃದಯಕ್ಕೆ ರಕ್ತ ಪೂರೈಕೆ ನಿಲ್ಲುವುದು,''ಎಂದು ಭೂಷಣ್ ತಿಳಿಸಿದರು. 

ತಾವು ಹಲವಾರು ಹೃದ್ರೋಗ ತಜ್ಞರನ್ನು ಭೇಟಿಯಾಗಿದ್ದು, ಅವರಲ್ಲೊಬ್ಬರಾಗಿದ್ದ ಪದ್ಮಶ್ರೀ ಪುರಸ್ಕೃತ ಹಾಗೂ ಎಐಐಎಂಎಸ್ ಇಲ್ಲಿನ ಮಾಜಿ ಪ್ರೊಫೆಸರ್ ಡಾ. ಉಪೇಂದ್ರ ಕೌಲ್ ಅವರು ಇಸಿಜಿ ಹಾಗೂ ಹಿಸ್ಟೋ ಪೆಥಾಲಜಿ ವರದಿ ನೋಡಿ ಇದು ಹೃದಯಾಘಾತದ ಪ್ರಕರಣವಲ್ಲ ಎಂದಿದ್ದರು ಎಂದು ಭೂಷಣ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News