ರಾಜಸ್ಥಾನ: ಮುಖ್ಯಮಂತ್ರಿ ಪ್ರಕಟಿಸಿದ್ದ ಉಪಕ್ರಮಗಳ ಜಾರಿಯಲ್ಲಿ ಇಲಾಖೆಗಳಿಂದ ನಿಧಾನಗತಿ ಧೋರಣೆ

Update: 2018-03-10 15:35 GMT

ಜೈಪುರ,ಮಾ.10: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು 2016-17ರ ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿದ್ದ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರಕಾರದ ಸುಮಾರು ಒಂದು ಡಝನ್ ಇಲಾಖೆಗಳು ವಿಫಲಗೊಂಡಿವೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಸಿಎಜಿ ವರದಿಯು ಬೆಟ್ಟುಮಾಡಿದೆ.

ಕನಿಷ್ಠ ಏಳು ಇಲಾಖೆಗಳು ಪ್ರಮುಖ ಯೋಜನೆಗಳು ಅಥವಾ ನೀತಿ ಉಪಕ್ರಮಗಳಿಗೆ ಸಂಬಂಧಿಸಿದಂತೆ ಒಂದೇ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ!

ಯುವ ಉದ್ಯಮಿಗಳು ಸ್ವಂತ ಉದ್ಯಮಗಳನ್ನು ಸ್ಥಾಪಿಸಲು ಹಣಕಾಸು ನೆರವನ್ನು ಒದಗಿಸಲು ರಾಜಸ್ಥಾನ ಸ್ಟಾರ್ಟ್-ಅಪ್ ನೀತಿ-2015ನ್ನು ರಾಜ್ಯದಲ್ಲಿ ಜಾರಿಗೊಳಿ ಸಲಾಗಿತ್ತಾದರೂ 2016-17ನೇ ಸಾಲಿನಲ್ಲಿ ಇದಕ್ಕಾಗಿ ಹಣವನ್ನು ವೆಚ್ಚ ಮಾಡಲಾಗಿಲ್ಲ.

 ಸಾರ್ವಜನಿಕ ಆರೋಗ್ಯ ಮತ್ತು ಇಂಜಿನಿಯರಿಂಗ್ ಹಾಗೂ ಜಲ ಸಂಪನ್ಮೂಲಗಳ ಇಲಾಖೆಗಳಲ್ಲಿಯೂ ನಿಧಾನಗತಿಯ ಧೋರಣೆ ಕಂಡುಬಂದಿದೆ.

1,945 ಕೋ.ರೂ.ವೆಚ್ಚದ ಜೈಪುರ-ಬಿಸಲಪುರ ನೀರು ಪೂರೈಕೆ ಯೋಜನೆಯ ಎರಡನೇ ಹಂತಕ್ಕಾಗಿ ಯಾವುದೇ ವೆಚ್ಚವನ್ನು ಮಾಡಲಾಗಿಲ್ಲ. ಇದೇ ರೀತಿ ಮುಂಗಡಪತ್ರ ದಲ್ಲಿ ಪ್ರಕಟಿಸಲಾಗಿದ್ದ 1,064 ಕೋ.ರೂ.ವೆಚ್ಚದಲ್ಲಿ ದೇವಾಸ್-3ರಿಂದ ರಾಜಸಮಂದ್ ಸರೋವರಕ್ಕೆ ನೀರು ಪೂರೈಕೆ ಯೋಜನೆಯ ಮೊದಲ ಹಂತ, 624.85 ಕೋ.ರೂ.ವೆಚ್ಚದ ಕುಂಭಾರಮ್ ಏತ ನೀರಾವರಿ ಯೋಜನೆ ಮತ್ತು 644.93 ಕೋ.ರೂ.ವೆಚ್ಚದಲ್ಲಿ ಉದಯಪುರವಾಟಿ ಪ್ರದೇಶಕ್ಕೆ ಕುಡಿಯುವ ನೀರಿನ ಪೂರೈಕೆ ಯೋಜನೆಗಳಿಗೂ ಹಣವನ್ನು ವೆಚ್ಚ ಮಾಡಲಾಗಿಲ್ಲ.

ವಿವಿಧ ಸರಕಾರಿ ಇಲಾಖೆಗಳಲ್ಲಿ ಒಟ್ಟು 67.02 ಕೋ.ರೂ.ಗಳ ಹಣಕಾಸು ದುರುಪಯೋಗ, ಕಳ್ಳತನ ಮತ್ತು ಸರಕಾರಕ್ಕೆ ನಷ್ಟವನ್ನುಂಟು ಮಾಡಿದ 877 ಪ್ರಕರಣಗಳು ಬಾಕಿಯಿವೆ ಎಂದೂ ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News