ಉತ್ತರ ಪ್ರದೇಶ: ಕತ್ತರಿಸಿದ ಕಾಲನ್ನು ತಲೆಯಡಿಗೆ ಇಟ್ಟ ವೈದ್ಯ !

Update: 2018-03-11 04:32 GMT

ಝಾನ್ಸಿ, ಮಾ. 11: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಕಾಲು ಕತ್ತರಿಸಿ, ಆತನ ತಲೆಯಡಿಗೇ ಆಧಾರವಾಗಿ ಇಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ತುರ್ತುನಿಗಾ ಘಟಕದಲ್ಲಿ ವ್ಯಕ್ತಿಯ ಕಾಲನ್ನೇ ದಿಂಬಾಗಿ ಬಳಸಿರುವ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಆಮ್ಲಜನಕ ಕೊರತೆಯಿಂದ ಹಲವು ಮಕ್ಕಳು ಮೃತಪಟ್ಟ ಘಟನೆಯೂ ಸೇರಿದಂತೆ ಹಲವು ವಿವಾದಗಳಿಂದ ಉತ್ತರ ಪ್ರದೇಶ ಆರೋಗ್ಯ ಸೇವಾ ವಿಭಾಗ ಕುಖ್ಯಾತವಾಗಿದ್ದು, ಝಾನ್ಸಿ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜಿನ ಪ್ರಕರಣ ಇದಕ್ಕೆ ಹೊಸ ಸೇರ್ಪಡೆ.

ಪ್ರಕರಣದ ತನಿಖೆಗೆ ನಾಲ್ಕು ಮಂದಿಯ ಸಮಿತಿ ರಚಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಸಾಧಾನ ಕೌಶಿಕ್ ಹೇಳಿದ್ದಾರೆ. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ರಾಜೀವ್ ಸಿನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, 48 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಕುಚೋದ್ಯದ ಪ್ರಕರಣವಿರಬೇಕು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ತುರ್ತುನಿಗಾ ಘಟಕದ 30 ಮಂದಿಯ ಜತೆ ನಾನು ಮಾತನಾಡಿದ್ದೇನೆ. ಸಿಬ್ಬಂದಿ ಹೀಗೆ ಮಾಡಿದ್ದನ್ನು ಯಾರೂ ನೋಡಿಲ್ಲ ಎಂದು ಅವರು ಹೇಳಿದ್ದಾರೆ. ರೋಗಿಯ ಸಹಾಯಕ್ಕೆ ಇದ್ದವರು ದಿಂಬಾಗಿ ಇದನ್ನು ಬಳಸಿದ್ದಾರೆ ಎಂದು ಅವರು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಘನಶ್ಯಾಮ (28) ಎಂಬ ವ್ಯಕ್ತಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಲಾ ವಾಹನದಲ್ಲಿ ಕ್ಲೀನರ್ ಆಗಿದ್ದ ಈತ ಇದ್ದ ಬಸ್ಸು ಝಾನ್ಸಿಯಿಂದ 65 ಕಿಲೋಮೀಟರ್ ದೂರದ ಮರುವಾನಿಪುರ ಎಂಬಲ್ಲಿ ಅಪಘಾತಕ್ಕೀಡಾಗಿತ್ತು. ಕಾಲು ಕಳೆದುಕೊಂಡಿದ್ದ ಘನಶ್ಯಾಮನನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಸಹೋದರ, ತಾಯಿ ಮತ್ತು ಇತರ ಸಂಬಂಧಿಕರು ಆಸ್ಪತ್ರೆಗೆ ಜತೆಗೆ ಬಂದಿದ್ದರು. ವೈದ್ಯಕೀಯ- ಕಾನೂನಾತ್ಮಕ ಪ್ರಕ್ರಿಯೆ ಮುಗಿದ ಬಳಿಕ ತುಂಡಾದ ಕಾಲು ಹಿಡಿದುಕೊಂಡಿದ್ದ ಮಹಿಳೆ ಅದನ್ನು ವೈದ್ಯಕೀಯ ಸಿಬ್ಬಂದಿಗೆ ನೀಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ದಿಂಬು ಲಭ್ಯವಿಲ್ಲದ ಕಾರಣ ವೈದ್ಯರೇ ಇದನ್ನು ರೋಗಿಗೆ ದಿಂಬಾಗಿ ಇಟ್ಟಿದ್ದಾರೆ ಎಂದು ಗಾಯಾಳುವಿನ ತಾಯಿ ದೇವಕಿ ಸುದ್ದಿಗಾರರಿಗೆ ತಿಳಿಸಿದರು. ಸಿಸಿಟಿವಿ ದೃಶ್ಯಾವಳಿ ನೋಡಿದ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬಹುದು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News