ಗಂಡುಮಕ್ಕಳತ್ತ ಗುಜರಾತಿಗಳ ಚಿತ್ತ !

Update: 2018-03-11 04:27 GMT

ಅಹ್ಮದಾಬಾದ್, ಮಾ. 11: ಲಿಂಗಾನುಪಾತ ಕುಸಿತದ ಬಿಸಿ ಇಡೀ ದೇಶಕ್ಕೆ ತಟ್ಟಿದ್ದರೆ, ಗುಜರಾತ್ ದಂಪತಿಗಳು ಮಾತ್ರ ಇನ್ನೂ ಗಂಡುಮಕ್ಕಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವುದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ವರದಿಯಿಂದ ಬಹಿರಂಗವಾಗಿದೆ.

ರಾಜ್ಯದ ಮಹಿಳೆಯರು ಹೆಣ್ಣುಮಕ್ಕಳಿಗಿಂತ ಹೆಚ್ಚಾಗಿ ಗಂಡುಮಕ್ಕಳ ಬಗ್ಗೆ ಒಲವು ಹೊಂದಿರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ.

ಇಬ್ಬರು ಮಕ್ಕಳಿರುವ ಮಹಿಳೆಯರ ಪೈಕಿ ಶೇಕಡ 92ರಷ್ಟು ಮಂದಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಒಬ್ಬ ಗಂಡುಮಗು ಹೊಂದಿರುವ ಶೇಕಡ 88ರಷ್ಟು ಮಹಿಳೆಯರು ಮುಂದೆ ಮಕ್ಕಳೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಆದಾಗ್ಯೂ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ ಮಹಿಳೆಯರ ಪೈಕಿ ಶೇಕಡ 54ರಷ್ಟು ಮಂದಿ ಗಂಡುಮಗು ಬೇಕು ಎಂಬ ಹಂಬಲದಿಂದ ಮೂರನೇ ಮಗು ಪಡೆಯುವ ಇಚ್ಛೆಯಲ್ಲಿಲ್ಲ. ಅಂದರೆ ಶೇಕಡ 46ರಷ್ಟು ಮಹಿಳೆಯರು ಗಂಡುಮಗು ಬೇಕು ಎಂಬ ಅಭಿಲಾಷೆಯಿಂದ ಮೂರನೇ ಮಗುವಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಅಧಿಕಾರಿಗಳ ವಿವರಣೆ.

ಸಮೀಕ್ಷೆಯಿಂದ ತಿಳಿದುಬರುವಂತೆ, ಶೇಕಡ 12ರಷ್ಟು ಮಹಿಳೆಯರು ಮತ್ತು ಶೇಕಡ 15ರಷ್ಟು ಪುರುಷರು ನೇರವಾಗಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಶೇಕಡ 2-3ರಷ್ಟು ಪುರುಷ ಹಾಗೂ ಮಹಿಳೆಯರು ಮಾತ್ರ ಹೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಜರಾತಿ ಮಹಿಳೆಯರಲ್ಲಿ ಯೋಜಿತವಲ್ಲದ ಗರ್ಭಧಾರಣೆ ಕೂಡಾ ಅತ್ಯಧಿಕ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. 2001ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಲಿಂಗಾನುಪಾತ 1000 ಗಂಡುಮಕ್ಕಳಿಗೆ 886 ಹೆಣ್ಣುಮಕ್ಕಳಿದ್ದರು. ಆದರೆ ಈ ಪ್ರಮಾಣ 2016ರಲ್ಲಿ 848 ಹಾಗೂ 2017ರಲ್ಲಿ ಇದು 842ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News