ತಂದೆಯ ಹಂತಕರನ್ನು ನಾವು ಕ್ಷಮಿಸಿದ್ದೇವೆ:ರಾಹುಲ್ ಗಾಂಧಿ

Update: 2018-03-11 06:03 GMT

ಸಿಂಗಾಪುರ, ಮಾ.11: ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿರುವ ಹಂತಕರನ್ನು ನಾನು ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿಯವರು ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಐಐಎಂ ಅಲುಮ್ನಿ ಸಂಘಟನೆ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ತಂದೆಯ ಹತ್ಯೆ ಆಘಾತ ನೀಡಿತ್ತು. ನನಗೆ ಹಾಗೂ ಸಹೋದರಿ ಪ್ರಿಯಾಂಕಾ ಅವರಿಗೆ ಈ ಆಘಾತದಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಯಿತು. ಬೇಸರ, ನೋವು ಆವರಿಸಿತ್ತು. ಕೋಪ ಇತ್ತು. ಆದರೆ ನಾವು ಈಗ ಹಂತಕರನ್ನು ಕ್ಷಮಿಸಿದ್ದೇವೆ" ಎಂದರು.

ಟಿವಿಯಲ್ಲಿ ಪ್ರಭಾಕರನ್ ಸಾವನ್ನಪ್ಪಿರುವುದನ್ನು ನೋಡಿದೆ. ಆ ವೇಳೆ ನನ್ನಲ್ಲಿ ಎರಡು ಭಾವನೆಗಳು ಮೂಡಿದವು. ಮೊದಲನೇದಾಗಿ ಒಬ್ಬ ವ್ಯಕ್ತಿಯನ್ನು ಹೀಗೇಕೆ ಅವಮಾನಿಸುತ್ತಿದ್ದಾರೆಂದು ಮತ್ತು ಎರಡನೇದಾಗಿ  ಆತನ ಕೆಟ್ಟ ಪರಿಸ್ಥಿತಿ ಹಾಗೂ ಆತನ ಮಕ್ಕಳ ಸ್ಥಿತಿ ನಮ್ಮ ಮುಂದೆ ಬಂತು'' ಎಂದು ಹಳೆಯ ನೆನಪುಗಳನ್ನು ತೆರೆದಿಟ್ಟರು.

ನಾನು ಯಾವುದೇ ಹಿಂಸಾಚಾರವನ್ನು ಇಷ್ಟಪಡುವುದಿಲ್ಲ. ತಂದೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿರುವುದಕ್ಕೆ ಯಾವುದೇ ಕಾರಣ ಇದ್ದರೂ ಹಂತಕರನ್ನು ನಾವು ಕ್ಷಮಿಸಿದ್ದೇವೆಂದು ಹೇಳಿದರು.

“ನನ್ನ ತಂದೆ ಹಾಗೂ ನನ್ನ ಅಜ್ಜಿ ಕೂಡ ಒಂದಲ್ಲಾ ಒಂದು ದಿನ ಸಾವನ್ನಪ್ಪುತ್ತಾರೆಂಬುದು ನಮಗೆ ಗೊತ್ತಿತ್ತು. ರಾಜಕೀಯದಲ್ಲಿ ಕೆಲ ಸಂಘಟನೆಗಳ ವಿರುದ್ಧ ಮತ್ತು ಒಂದು ವಿಚಾರದ ಪರವಾಗಿ ನಿಂತಾಗ ಒಂದಲ್ಲಾ ಒಂದು ದಿನ ಸಾವು  ಖಚಿತವಾಗಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

“ನನ್ನ ಅಜ್ಜಿ ಹತ್ಯೆಯಾದಾಗ ನನಗೆ 14 ವರ್ಷ ವಯಸ್ಸಾಗಿತ್ತು. ನನ್ನ ಅಜ್ಜಿಯನ್ನು ಹತ್ಯೆ ಮಾಡಿದ ಹಂತಕನೊಂದಿಗೆ ನಾನು ಬ್ಯಾಡ್ಮಿಂಟನ್ ಆಡಿದ್ದೆ. ಅಜ್ಜಿಯ ಬಳಿಕ ನನ್ನ ತಂದೆಯನ್ನು ಹತ್ಯೆ ಮಾಡಲಾಗಿತ್ತು. ಇದೀಗ ನಿರ್ದಿಷ್ಟ ವಾತಾವರಣದಲ್ಲಿ ಜೀವನ ಸಾಗಿದೆ.  ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯವರೆಗೂ 15ಕ್ಕೂ ಹೆಚ್ಚು ವ್ಯಕ್ತಿಗಳು ನಮ್ಮನ್ನು ಸುತ್ತುವರೆದಿರುತ್ತಾರೆ. ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುವುದಿಲ್ಲ.  ಇದನ್ನು ನಾನು ಸೌಕರ್ಯವೆಂದು ಭಾವಿಸುವುದಿಲ್ಲ. ಇಂತಹ ವಿಚಾರಗಳನ್ನು ನಿಭಾಯಿಸುವುದು ಬಹಳ ಕಷ್ಟ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದರು.

1991ರ ಮೇ21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News