ಪರಮೇಶ್ವರ್ ಗೆದ್ದರೆ ನಾನು ಗೆದ್ದ ಹಾಗೆ: ಸಿ.ಎಂ ಸಿದ್ದರಾಮಯ್ಯ

Update: 2018-03-11 14:18 GMT

ಕೊರಟಗೆರೆ,ಮಾ.11: ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ ಪರಮೇಶ್ವರ್ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇಬೇಕು. ಜಾತಿ, ಮತ, ಬೇಧ ಮರೆತು ಅವರನ್ನು ಕೊರಟಗೆರೆ ಕ್ಷೇತ್ರದ ಜನರು ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕೊರಟಗೆರೆಯಲ್ಲಿ ಭಾನುವಾರ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಪರಮೇಶ್ವರ್ ಗೆದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಗೆದ್ದ ಹಾಗೆ. ರಾಹುಲ್ ಗಾಂಧಿ ಅವರು ಗೆದ್ದರೆ ನಾನು ಗೆದ್ದ ಹಾಗೆ. ಹೀಗಾಗಿ, ಪರಮೇಶ್ವರ್ ಅವರು ಯಾವುದೇ ಕಾರಣಕ್ಕೂ ಸೋಲಬಾರದು ಎಂದು ಹೇಳಿದರು.

ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಸರ್ಕಾರದ ಸಾಧನೆಯಲ್ಲಿ ಅವರದೂ ಪಾತ್ರ ಇದೆ. ನಾವಿಬ್ಬರು ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ಮಂತ್ರಿಮಂಡಲ ರಚನೆ, ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಸೇರಿದಂತೆ ಯಾವುದೇ ವಿಷಯದಲ್ಲೂ ಕೂಡಾ ಈವರೆಗೂ ಒಂದೇ ಒಂದು ಚಿಕ್ಕ ಭಿನ್ನಾಭಿಪ್ರಾಯವೂ ನಮ್ಮಿಬ್ಬರಲ್ಲಿ ಬಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಯಾರೋ ಕೆಲವರು ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಇದ್ದಕ್ಕೆಲ್ಲಾ ಕೊರಟಗೆರೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಹಾಗೆಯೇ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಡಾ.ಪರಮೇಶ್ವರ್ ಅವರು ಗೆಲ್ಲುವುದೂ ಕೂಡಾ ಸೂರ್ಯ ಹುಟ್ಟುವಷ್ಟೇ ಸತ್ಯ ಎಂದು ಭರವಸೆ ವ್ಯಕ್ತಪಡಿಸಿದರು.

39 ಕೆರೆಗೆ ನೀರು: ಎತ್ತಿನ ಹೊಳೆ ಯೋಜನೆಯಡಿ ಕೊರೆಗೆರೆ ತಾಲೂಕಿನ 39 ಕೆರೆಗಳಿಗೆ ನೀರು ತುಂಬಿಸಲು 590 ಕೋಟಿ ರೂ. ಯೋಜನೆ ರೂಪಿಸಿ ಟೆಂಡರ್ ಕೂಡಾ ಆಗಿದೆ. ಭೈರಗೊಂಡ್ಲು ಏತ ನೀರಾವರಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಈ ಕ್ಷೇತ್ರದ ಶಾಸಕರೇನೂ ನನ್ನನ್ನು ಕೇಳಿರಲಿಲ್ಲ. ಡಾ.ಪರಮೇಶ್ವರ್ ಅವರೇ ಈ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಈ ಯೋಜನೆ ಮಂಜೂರಾತಿಗೆ ಕೋರಿದ್ದರು. ಹೀಗಾಗಿ, ಯೋಜನೆ ಅನುಷ್ಠಾನ ಆಗುತ್ತಿದೆ. ಇಂತಹ ಕಾಳಜಿಯ ವ್ಯಕ್ತಿತ್ವವುಳ್ಳ ಪರಮೇಶ್ವರ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರಿನ ಪುಲಕೇಶಿನಗರ, ಸಿ.ವಿ.ರಾಮನ್ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಹೀಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಡಾ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೆವು. ಆದರೆ ಅವರು 'ನನ್ನ ಹೆಣ ಹೊರುವವರೂ ಅವರೇ, ಪಲ್ಲಕ್ಕಿ ಹೊರವವರೂ ಅವರೇ, ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ' ಎಂದು ಹೇಳಿದ್ದಾರೆ. ಕ್ಷೇತ್ರದ ಜನರು ಅವರ ನಂಬಿಕೆ ಹುಸಿಗೊಳಿಸಬಾರದು. ಪರಮೇಶ್ವರ್ ಗೆದ್ದರೆ ನಿಮ್ಮ ಮನೆಗೆ ಲಕ್ಷ್ಮಿ ಬಂದಂತೆ ಎಂದು ಹೇಳಿದರು.

ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಮಾತನಾಡಿ,‘ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂವಿಧಾನವನ್ನೇ ಬದಲಿಸುವ ಹುನ್ನಾರ ನಡೆಸುತ್ತಿದೆ. ಇನ್ನು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹೇಗೆ ಜಾರಿಗೊಳಿಸುತ್ತದೆ ಎಂದು ಪ್ರಶ್ನಿಸಿದರು.

ಮನುವಾದಿ, ಕೋಮುವಾದಿ ಬಿಜೆಪಿಯವರು ಸದಾಶಿವ ಆಯೋಗದ ವರದಿ ಜಾರಿ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರವೇ ಅದನ್ನು ಜಾರಿಗೊಳಿಸಬೇಕು. ಹೀಗಾಗಿ, ದಲಿತರು ಕಾಂಗ್ರೆಸ್‌ ಬೆಂಬಲಿಸಬೇಕು. ಪರಮೇಶ್ವರ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಸಿದ್ದರಾಮಯ್ಯ ಬಂದಿದ್ದು ಆನೆ ಬಲ ತಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊರಟಗೆರೆಗೆ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಕೊರಟಗೆರೆ ಕ್ಷೇತ್ರ ಮತ್ತೆ ರಾಜ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಪರಮೇಶ್ವರ್ ಅವರು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಯಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಯಾವುದೇ ರೀತಿ ವಿರೋಧ ಮಾಡಿಲ್ಲ. ಬದಲಾಗಿ ದಲಿತ ಸಮುದಾಯಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News