ಭಯೋತ್ಪಾದನೆ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳಿ: ಸಂಸದೀಯ ಸಮಿತಿ

Update: 2018-03-11 16:06 GMT

ಹೊಸದಿಲ್ಲಿ, ಮಾ. 11: ಸೇನಾ ಪಡೆಗಳ ಸ್ಥಾವರಗಳ ಭದ್ರತೆ ಬಿಗಿಗೊಳಿಸಬೇಕು ಹಾಗೂ ಅವುಗಳ ಮೇಲೆ ದಾಳಿ ಮರುಕಳಿಸಲು ಅವಕಾಶ ನೀಡಬಾರದು ಸಂಸದೀಯ ಸಮಿತಿ ಗುರುವಾರ ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಗಡಿಗುಂಟ ಒಳನುಸುಳುವಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಸಮಿತಿ ಗೃಹ ಸಚಿವಾಲಯಕ್ಕೆ ಸಲಹೆ ನೀಡಿದೆ ಹಾಗೂ ಜಮ್ಮ ಕಾಶ್ಮೀರದಲ್ಲಿ ಎಲ್ಲಾ ರೀತಿಯ ಭಯೋತ್ಪಾದಕ ಚಟುವಟಿಕೆ ತಡೆಯಬೇಕು ಎಂದು ಹೇಳಿದೆ.

ದೇಶದ ಒಟ್ಟು ಆಂತರಿಕ ಭದ್ರತೆ 2016ರಲ್ಲಿ ನಿಯಂತ್ರಣದಲ್ಲಿ ಇತ್ತು ಎಂಬ ಗೃಹ ಸಚಿವಾಲಯದ ಅಭಿಪ್ರಾಯವನ್ನು ನಿರಾಕರಿಸಿರುವ ಸಂಸದೀಯ ಸಮಿತಿ, ಜಮ್ಮು ಹಾಗೂ ಕಾಶ್ಮೀರ ವರ್ಷಪೂರ್ತಿ ಕುದಿಯುತ್ತಿತ್ತು ಹಾಗೂ ಇಲ್ಲಿ ಒಳನುಸುಳುವಿಕೆಯ ಪ್ರಯತ್ನ ಅತ್ಯಧಿಕ ಏರಿಕೆಯಾಗುತ್ತಿತ್ತು ಎಂದಿದೆ. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನೇತೃತ್ವದ ಗೃಹ ವ್ಯವಹಾರಕ್ಕಿರುವ ಸಂಸದೀಯ ಸಮಿತಿ, ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಪೊಲೀಸರು, ಅರೆಸೇನಾ ಪಡೆಯ ಸಿಬ್ಬಂದಿ ಪ್ರಾಣ ಕಳೆದುಕೊಳ್ಳಲು ಹಣಕಾಸು ಸಂಪನ್ಮೂಲದ ಕೊರತೆ ಕಾರಣ ಎಂದಿದೆ. ದೇಶದ ಒಳನಾಡಿನಲ್ಲಿ ಭಯೋತ್ಪಾದನೆ ಇದೆ. ತುಲನಾತ್ಮಕವಾಗಿ ನೋಡಿದರೆ 2016ರಲ್ಲಿ ಎಡಪಂಥೀಯ ಉಗ್ರವಾದ ವೌನವಾಗಿತ್ತು ಎಂದು ಅದು ಹೇಳಿದೆ. ಸೇನಾ ಪಡೆ ಹಾಗೂ ಅರೆ ಸೈನಿಕ ಪಡೆಯ ಭದ್ರತಾ ಸ್ಥಾವರಗಳನ್ನು ಭಯೋತ್ಪಾದಕರು ಗುರಿಯಾಗಿ ದಾಳಿ ನಡೆಸುತ್ತಿರುವುದು ಹೊಸ ಟ್ರೆಂಡ್ ಎಂದು ಸಮಿತಿ ಹೇಳಿದೆ. ಕಳೆದ ವರ್ಷ ಭದ್ರತಾ ಪಡೆಯ 82 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸಮಿತಿ ತಿಳಿಸಿದೆ. ಇದೇ ಸಂದರ್ಭ ದೌರ್ಬಲ್ಯದ ಬಗ್ಗೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ ಹಾಗೂ 2016ರಲ್ಲಿ ಸಂಭವಿಸಿದ ಸರಣಿ ಭಯೋತ್ಪಾದಕ ದಾಳಿ ಸೇನಾ ಪಡೆಯ ಭದ್ರತಾ ಸ್ಥಾವರಗಳ ಕೊರತೆಗಳನ್ನು ಎತ್ತಿ ತೋರಿಸಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News