ಶಿಕ್ಷಣದಿಂದಲೇ ದೇಶವು ಅಭಿವೃದ್ದಿಯಾಗಲು ಸಾಧ್ಯ: ನಾಡೋಜ ಡಾ.ಪಾಟೀಲ ಪುಟ್ಟಪ್ಪ

Update: 2018-03-11 17:01 GMT

ಮುಂಡಗೋಡ,ಮಾ.11: ಕನ್ನಡ ಭಾಷೆ ಜತೆ ಜತೆಗೆ ಇಂಗ್ಲೀಷ್ ಶಿಕ್ಷಣ ಪಡೆಯುವ ಅಗತ್ಯ ಇದೆ. ಕನ್ನಡವನ್ನು ಚೆನ್ನಾಗಿ ಕಲಿತರೆ ಯಾವುದೇ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ನಾಡೋಜ,ಡಾ.ಪಾಟೀಲ ಪುಟ್ಟಪ್ಪ ಹೇಳಿದರು

ಅವರು ತಾಲೂಕಿನ ಇಂದೂರ ಗ್ರಾಮದ ಶ್ರೀಮಂಜುನಾಥ ಶಿಕ್ಷಣ ಮತ್ತು ಸಮಾಜ ಸೇವಾ ಟ್ರಸ್ಟ್(ರಿ), ಆರ್.ಕೆ.ಎನ್. ಕಾನ್ವೆಂಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಧರ್ಮಶ್ರೀ’ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.

ಕನ್ನಡ ಸುಮಾರು 3000 ವರ್ಷಗಳ ಹಿಂದಿನ ಭಾಷೆ. ಜಗತ್ತಿನಲ್ಲಿ 6000 ಭಾಷೆಗಳಿವೆ. ಮುಂದಿನ ಶತಮಾನದವರೆಗೆ 400 ಭಾಷೆಗಳು ಉಳಿಯುತ್ತವೆ . ಇದರಲ್ಲಿ ಕನ್ನಡ ಭಾಷೆಯು ಉಳಿಯುತ್ತದೆ ಎಂದ ಅವರು, ಶಿಕ್ಷಣದಿಂದಲೇ ದೇಶವು ಅಭಿವೃದ್ದಿಯಾಗಲು ಸಾಧ್ಯ. ಸಮಾಜದಲ್ಲಿ ಎಲ್ಲರೂ ನಮ್ಮವರು ಎಂದು ಪ್ರೀತಿ ವಿಶ್ವಾಸದಿಂದಿರಬೇಕು. ದ್ವೇಷದಿಂದ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದರು 

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕನ್ನಡದ ನೆಲ, ಜಲ ಹಾಗೂ ಭಾಷೆಗೆ ಅಪಾರ ಗೌರವವಿದೆ. ಗ್ರಾಮಾಂತರ ಪ್ರದೇಶದ ಬಡ ಮಕ್ಕಳು ವಿದ್ಯಾವಂತರಾಗಬೇಕು. ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಮತ್ತು ಕಂಪ್ಯೂಟರ ಜ್ಞಾನವೂ ತುಂಬಾ ಅಗತ್ಯ ಇರುವುದರಿಂದ ತಂದೆ ತಾಯಂದಿರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು. 

ರೋಟರಿ ಕ್ಲಬ್‍ನ ಅಧ್ಯಕ್ಷ ಎಸ್.ಕೆ.ಬೋರಕರ, ಡಾ.ಪಿ.ಪಿ.ಛಬ್ಬಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಧರ್ಮರಾಜ ನಡಿಗೇರಿ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಎಕೆಡೆಮಿ ಆಫ್ ಮೆಥೆಮೆಟಿಕ್ಸ ಚಳ್ಳಕೆರೆಯವರು ಏರ್ಪಡಿಸಿದ ಗಣಿತ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಶಾಲೆಗೆ ಮತ್ತು ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇಂದೂರಿನ ನಿವೃತ್ತ ಶಿಕ್ಷಕ ಎಸ್.ಎಸ್.ಸುಂಕದ ಅವರಿಗೆ ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ರವಿಗೌಡ ಪಾಟೀಲ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ತಾ.ಪಂ.ಸದಸ್ಯ ಜ್ಞಾನದೇವ ಗುಡಿಯಾಳ, ಕಾಂಗೈ ಹಿರಿಯ ಮುಖಂಡ ಎಚ್.ಎಮ್.ನಾಯ್ಕ, ಬಿ.ಕೆ.ಪಾಟೀಲ, ಉದ್ಯಮಿ ಎ.ವಿ.ಪಾಲೇಕರ, ವಿ.ಎಸ್.ಕೊಣಸಾಲಿ, ಕೆ.ಆರ್.ಬಾಳಿಕಾಯಿ, ಎಮ್.ಆಯ್.ನಡಿಗೇರಿ, ಗುಡ್ಡಪ್ಪ ಪೂಜಾರ, ಶಿವಾಜಿ ಸುಣಗಾರ, ತಂಗಚ್ಚನ್ ಪಟ್ಯಾಡಿಯಲ್ ಶಿವಾಜಿ ದೇವಿಕೊಪ್ಪ, ನಾಗರಾಜ ಅಂಟಾಳ ಆಗಮಿಸಿದ್ದರು.

ಶಾಲಾ ಮಕ್ಕಳು ಪ್ರಾರ್ಥನೆ ಮತ್ತು ಸ್ವಾಗತಗೀತೆ ಹೇಳಿದರು. ದ್ರವ್ಯಾ ಶೇಟ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ವೇತಾ ಪಾಟೀಲ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಿತು. 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News