ಸ್ವಯಂವರದಲ್ಲಿ ವಿವಾಹವಾದ ಆಲಿಯಾ, ಕಂಗನಾ !

Update: 2018-03-12 05:59 GMT

ಡೆಹ್ರಾಡೂನ್, ಮಾ. 12: ಭಾರತ ಹಾಗೂ ಹೊರದೇಶಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಮಂದಿ ಅತಿಥಿಗಳ ಸಮ್ಮುಖದಲ್ಲಿ ನಡೆದ ವಿಶಿಷ್ಟ ಸ್ವಯಂವರದಲ್ಲಿ ಆಲಿಯಾ, ಶ್ರದ್ಧಾ ಹಾಗೂ ಕಂಗನಾ ವಿವಾಹ ಬಂಧನಕ್ಕೆ ಒಳಗಾದರು. ಈ ಮೂವರು ಕ್ರಮವಾಗಿ ಬಬ್ಲೂ, ಸೋನು ಹಾಗೂ ನಂದು ಎಂಬವರನ್ನು ವರಿಸಿದರು.

ಈ ವಿಶಿಷ್ಟ ಸ್ವಯಂವರ ನಡೆದದ್ದು ಉತ್ತರಾಖಂಡದ ತೆಹ್‌ರಿ ಗರ್ವ್ಹಾಲಿ ಜಿಲ್ಲೆಯ ಪಂಟವಾರಿ ಎಂಬ ಗ್ರಾಮದಲ್ಲಿ. ಸ್ಥಳೀಯ ತಿನಸು, ಗಾನ- ನೃತ್ಯದ ಸಡಗರ ಸಂಭ್ರಮದಲ್ಲಿ ಹಸೆ ಮಣೆ ಏರಿದ್ದು, ಬಾಲಿವುಡ್ ತಾರೆಗಳಲ್ಲ; ಇದು ಎರಡನೇ ವರ್ಷದ ಬಕ್ರಿ ಸ್ವಯಂವರದ ಝಲಕ್‌ಗಳು. ಪ್ರಗತಿಪರ ಮೇಕೆ ಸಾಕಾಣಿಕೆದಾರರು, ತಳಿಶುದ್ಧತೆ ಉಳಿಸುವ ಸಲುವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ವಿಶಿಷ್ಟ ಕಾರ್ಯಕ್ರಮ ಇದು.

"ಈ ಪರಿಕಲ್ಪನೆ ಸರಳ; ಆದರೆ ಸಂದೇಶ ಮಹತ್ವದ್ದು. ಇದು ವಲಸೆ ತಡೆದು ಜನ ಕೃಷಿ- ಪಶು ಸಾಗಾಣಿಕೆಗೆ ಉತ್ತೇಜಿಸುವಂಥದ್ದು" ಎಂದು ಆಸ್ಟ್ರೇಲಿಯಾದಿಂದ ಆಗಮಿಸಿದ್ದ ತಮರಾ ಗ್ರಿಬ್ಬಲ್ ಬಣ್ಣಿಸಿದರು. ಈ ಬೆಟ್ಟ ಪ್ರದೇಶದಲ್ಲಿ ಆಡು ಮತ್ತು ಕುರಿಗಳ ತಳಿ ಸಂರಕ್ಷಣೆಯಲ್ಲಿ ಇದು ಮಹತ್ವದ್ದು ಎಂದು ತಜ್ಞರು ಅಭಿಪ್ರಾಯಪಟ್ಟರು.

ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 1.15 ಲಕ್ಷ ಮಂದಿ ನೋಂದಾಯಿತ ಮೇಕೆ ಸಾಕಾಣಿಕೆದಾರರಿದ್ದಾರೆ. ಪರಸ್ಪರ ಭಿನ್ನ ತಳಿಗಳ ನಡುವೆ ಸಂತಾನೋತ್ಪತ್ತಿ ನಡೆದರೆ ಒಳ್ಳೆಯ ಮೇಕೆಗಳು ಜನಿಸುವುದಿಲ್ಲ ಎಂಬ ಕಾರಣಕ್ಕೆ ತಳಿಶುದ್ಧತೆ ಕಾಪಾಡಲು ಈ ಪ್ರಯತ್ನ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News