ಬಿಹಾರ ಉಪ ಚುನಾವಣೆ ಕ್ಷೇತ್ರವೊಂದರಲ್ಲಿ ಇವಿಎಂ ವಂಚನೆ : ಕಾಂಗ್ರೆಸ್ ಆರೋಪ

Update: 2018-03-12 07:51 GMT

ಪಾಟ್ನಾ, ಮಾ. 12: ರವಿವಾರ ಉಪಚುನಾವಣೆ ನಡೆದ ಕ್ಷೇತ್ರಗಳಲ್ಲೊಂದರಲ್ಲಿ ಬಿಜೆಪಿಗೆ ಅನುಕೂಲಕರವಾಗುವಂತೆ ದೊಡ್ಡ ಮಟ್ಟದಲ್ಲಿ ಇವಿಎಂ ಅನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಬುವಾ ಅಸೆಂಬ್ಲಿ ಕ್ಷೇತ್ರದಲ್ಲಿ ಸುಮಾರು 137 ವಿದ್ಯುನ್ಮಾನ ಮತಯಂತ್ರಗಳು ತಿರುಚಲ್ಪಟ್ಟಿವೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷ ಕೌಕಬ್ ಖಾದ್ರಿ ಆರೋಪಿಸಿದ್ದಾರೆ. ಮುಸ್ಲಿಂ ಹಾಗೂ ದಲಿತ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿನ ಮತದಾರರ ಬೂತಿನಲ್ಲಿ ಇವಿಎಂ ತಿರುಚಲ್ಪಟ್ಟಿವೆ ಎಂಬುದು ಅವರ ಆರೋಪವಾಗಿದೆ. ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿ ಇವಿಎಂ ಸಮಸ್ಯೆಯಿದ್ದ ಕಡೆಗಳಲ್ಲಿ ಮರು ಮತದಾನಕ್ಕೆ ಆಗ್ರಹಿಸುವುದು ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಕೈಮೂರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ವರ್ ಪ್ರಸಾದ್ ಸಿಂಗ್ ಅವರನ್ನು ಸಂಪರ್ಕಿಸಿದಾಗ ಕೇವಲ 25 ಇವಿಎಂಗಳಲ್ಲಿ ದೋಷ ಕಾಣಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ. 25 ಕಡೆಗಳಲ್ಲಿ ವಿವಿಪ್ಯಾಟ್ ಯಂತ್ರಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ ಎಂಬ ದೂರು ಬಂದಿದ್ದವು. ಅವುಗಳನ್ನು ಕೂಡಲೇ ಸರಿ ಪಡಿಸಲಾಗಿದೆ. ಕಾಂಗ್ರೆಸ್ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಲ ಬೂತುಗಳಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ಒಪ್ಪಿದೆಯೆಂದು ಕೆಲ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆಯಾದರೂ ತಮಗೆ ಆಯೋಗದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.

ಭಬುವಾದ ಕನಿಷ್ಠ ಮೂರು ಕಡೆಗಳಲ್ಲಿ ಇವಿಎಂ ದೋಷ ಪ್ರಕರಣಗಳು ವರದಿಯಾಗಿವೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆಯೊಂದರ ವರದಿ ಹೇಳಿದೆ.

2015ರ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಮೃತಪಟ್ಟ ಶಾಸಕ ಆನಂದ್ ಭೂಷಣ್ ಪಾಂಡೆ ಅವರ ಪತ್ನಿ ರಿಂಕಿ ರಾಣಿ ಪಾಂಡೆ ಈ ಬಾರಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೇರಿದ ಕುರ್ಮಿ ಸಮುದಾಯದ ಶಂಭೂ ನಾಥ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News