ಫೆರಾರಿಯ ಅತ್ಯಂತ ವೇಗದ ಕಾರು ಭಾರತದಲ್ಲಿ ಬಿಡುಗಡೆ

Update: 2018-03-12 09:35 GMT

ಹೊಸದಿಲ್ಲಿ,ಮಾ.12 :  ಜಗದ್ವಿಖ್ಯಾತ ಸ್ಪೋರ್ಟ್ಸ್ ಕಾರು ತಯಾರಿಕಾ ಸಂಸ್ಥೆ ಫೆರ್ರಾರಿ ತನ್ನ 812 ಸೂಪರ್ ಫಾಸ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು ಅದರ ಎಕ್ಸ್-ಶೋರೂಂ ಬೆಲೆ ಬರೋಬ್ಬರಿ ರೂ. 5.20 ಕೋಟಿಯಾಗಿದೆ. ಇಟಲಿ ಮೂಲದ ಈ ಬ್ರ್ಯಾಂಡಿನ ಅತ್ಯಂತ ಶಕ್ತಿಶಾಲಿ ಹಾಗೂ ವೇಗದ ಕಾರು ಇದೆಂದು ಹೇಳಲಾಗಿದ್ದು ಈಗಾಗಲೇ ಬಹಳಷ್ಟು ಜನಪ್ರಿಯಗೊಂಡಿರುವ ಎಫ್ 12 ಬರ್ಲಿನೆಟ್ಟಾ ಇದರ ಉತ್ತರಾಧಿಕಾರಿಯೆಂದೇ 812 ಸೂಪರ್ ಫಾಸ್ಟ್ ಕಾರನ್ನು ಗುರುತಿಸಲಾಗಿದೆ.

ಎರಡು ಡೋರ್ ಹೊಂದಿರುವ ಈ ಸ್ಪೋರ್ಟ್ಸ್ ಕಾರಿನ ಜಾಗತಿಕ ಬಿಡುಗಡೆ ಜಿನೇವಾ ಮೋಟಾರ್ ಶೋ 2017ರಲ್ಲಿ ನಡೆದಿತ್ತು. ನೆಗೆದು ನಿಂತಿರುವ ಕುದುರೆಯನ್ನು ತನ್ನ ಲಾಂಛನವನ್ನಾಗಿ ಹೊಂದಿರುವ ಫೆರಾರಿ ಕಂಪೆನಿಯ ವಿ 12 ಇಂಜಿನಿನ 70ನೇ ವಾರ್ಷಿಕೋತ್ಸವದ ನೆನಪಿಗಾಗಿ 812 ಸೂಪರ್ ಫಾಸ್ಟ್ ಕಾರು ಬಿಡುಗಡೆಗೊಂಡಿದೆ.

ಈ ಕಾರು  6.5 ಲೀಟರ್ ವಿ 12 ಇಂಜಿನ್ ಹೊಂದಿದ್ದು ಇದು ಈ ಕಾರಿನ ವೇಗದ ಗುಟ್ಟಾಗಿದೆ. ಇಂಜಿನ್ ಜತೆ ಸೆವೆನ್-ಸ್ಪೀಡ್ ಡ್ಯೂವಲ್ ಕ್ಲಚ್ ಇದೆ. ನಿರ್ದಿಷ್ಟ ಗೇರ್ ಅನುಪಾತವು ಗೇರ್ ಹಾಕುವಲ್ಲಿನ ಸಮಯವನ್ನೂ ಕಡಿತಗೊಳಿಸುತ್ತದೆ.

ಈ 812 ಸೂಪರ್ ಫಾಸ್ಟ್ ಕಾರು ಕೇವಲ 2.9 ಸೆಕೆಂಡುಗಳ ಅವಧಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸಬಹುದಾಗಿದೆ ಹಾಗೂ ಇದರ ಗರಿಷ್ಠ ಸ್ಪೀಡ್ ಗಂಟೆಗೆ 340 ಕಿ.ಮೀ ಆಗಿದೆ.  ಈ ಕಾರಿಗೆ ಉದ್ದದ ಬೋನೆಟ್ ಇದ್ದು ಎಲ್‍ಇಡಿ ಹೆಡ್ ಲೈಟುಗಳು, ಮಸ್ಕ್ಯುಲರ್ ಎದುರಿನ ಬಂಪರ್ ಹೊಂದಿದೆ. ಕಾರಿನಲ್ಲಿ ಆರಾಮದಾಯಕ ಸೀಟುಗಳು. ಹೊಸ ವಿನ್ಯಾಸದ ಸ್ಟೀರಿಂಗ್ ವೀಲ್  ಹಾಗೂ ಲೇಟೆಸ್ಟ್ ಮನರಂಜನಾ ಉಪಕರಣ ಹಾಗೂ ಏರ್ ಕಂಡಿಷನಿಂಗ್ ವ್ಯವಸ್ಥೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News