ಪ್ರತಿಭಟನಾ ನಿರತ ರೈತರಿಗೆ ಆಹಾರ, ನೀರು ಒದಗಿಸಿ ಸಹಾಯ ಹಸ್ತ ಚಾಚಿದ ಮುಂಬೈ ವಾಸಿಗಳು

Update: 2018-03-12 11:22 GMT

ಮುಂಬೈ,ಮಾ.13 : ನಾಸಿಕ್ ನಗರದಿಂದ ಆರು ದಿನಗಳ ಹಿಂದೆ ಹೊರಟು ಬಿಸಿಲಿನ ಝಳದಲ್ಲಿ ಬಳಲಿ ಬೆಂಡಾದರೂ ಆತ್ಮವಿಶ್ವಾಸದಿಂದ ಮುನ್ನಡೆದು ರವಿವಾರ ಮಧ್ಯರಾತ್ರಿ ಮುಂಬೈ ತಲುಪಿ ಇದೀಗ ಆಝಾದ್ ನಗರ ಮೈದಾನದಲ್ಲಿ ಸೇರಿ ತಮ್ಮ ಬೇಡಿಕೆಗಳನ್ನು ಸರಕಾರದ  ಮುಂದಿರಿಸಿರುವ ಸಾವಿರಾರು ರೈತರ ಸಹಾಯಕ್ಕೆ ಮುಂಬೈ ನಿವಾಸಿಗಳು ಧಾವಿಸಿದ್ದಾರೆ.

ನಗರದ ಸಿಖ್ಖರು ರೈತರಿಗೆ ನೀರು ಆಹಾರ ನೀಡಿದ್ದರೆ, ಮುಸ್ಲಿಮರು ಬೈಕುಲ್ಲಾ ಜಂಕ್ಷನ್ ನಲ್ಲಿ ರೈತರಿಗೆ ಆಹಾರವೊದಗಿಸಿದ್ದಾರೆ.

ಮುಂಬೈಯ ಡಬ್ಬಾವಾಲಾಗಳು ಕೂಡ ರೈತರ ಸಹಾಯಕ್ಕೆ ಧಾವಿಸಿದ್ದಾರೆ. "ನಮ್ಮ ಅನ್ನದಾತರಾದ ರೈತರಿಗೆ ಸಹಾಯ ಮಾಡಿದ್ದೇವೆ. ದಾದರ್ ಹಾಗೂ ಕೊಲಾಬ ನಡುವೆ ಕೆಲಸ ನಿರ್ವಹಿಸುವ ಡಬ್ಬಾವಾಲಾಗಳನ್ನು ಸಂಪರ್ಕಿಸಿ ಆಹಾರ ಸಂಗ್ರಹಿಸಿ ರೈತ ಸಹೊದರರಿಗೆ ಆಝಾದ್ ಮೈದಾನದಲ್ಲಿ ವಿತರಿಸುವಂತೆ ಹೇಳಲಾಗಿದೆ" ಎಂದು ಮುಂಬೈ ಡಬ್ಬಾವಾಲ ಅಸೋಸಿಯೇನ್ ವಕ್ತಾರ ಸುಭಾಸ್ ತಾಲೇಕರ್ ಹೇಳಿದ್ದಾರೆ.

ಅಂತೆಯೇ ಡಬ್ಬಾವಾಲಾಗಳು ತಮ್ಮ ರೋಟಿ ಬ್ಯಾಂಕ್ ಕಾರ್ಯಕ್ರಮದನ್ವಯ ರೈತರಿಗೆ ಆಹಾರವೊದಗಿಸಿದ್ದಾರೆ. ಸಂಸ್ಥೆಯ ಬಳಿ ಜಿಪಿಎಸ್ ಅಳವಡಿಸಲ್ಪಟ್ಟ ವ್ಯಾನುಗಳಿದ್ದು ಇವುಗಳ ಮುಖಾಂತರ ಹೊಟೇಲುಗಳು, ಮನೆಗಳು ಹಾಗೂ ಸಮಾರಂಭಗಳ ಸ್ಥಳಗಳಲ್ಲಿ ಉಳಿದ ಆಹಾರಗಳನ್ನು ಸಂಗ್ರಹಿಸಿ  ಅಗತ್ಯವಿರುವವರಿಗೆ ನೀಡಲಾಗುತ್ತದೆ. ಇದೇ ಮಾದರಿಯಲ್ಲಿ ಇಂದೂ ಮಾಡಲಾಗಿದೆ.ತರುವಾಯ ನಾಗರಿಕರು ರೈತರಿಗೆ ವಡಾ ಪಾವ್ ನೀಡುತ್ತಿರುವುದೂ ಕಂಡು ಬಂದಿದೆ.

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ತಮ್ಮ ಯಾತ್ರೆಯಿಂದಾಗಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲೆಂದು ರೈತರು ರಾತ್ರಿ 1 ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ತನಕ ನಡೆದು ಸಯಾನ್ ನಿಂದ ಆಝಾದ್ ಮೈದಾನ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News