ತುಮಕೂರು: ಸಾವಿರಾರು ಸಾಯಿಬಾಬ ಭಕ್ತರಿಂದ ಪಾದುಕ ದರ್ಶನ

Update: 2018-03-12 13:45 GMT

ತುಮಕೂರು,ಮಾ.12: ತುಮಕೂರಿನ ರಾಮಕೃಷ್ಣ ನಗರದಲ್ಲಿರುವ ಶ್ರೀಶಿರಡಿ ಸಾಯಿನಾಥ ಸೇವಾ ಸಮಿತಿ ಆಯೋಜಿಸಿದ್ದ ಶ್ರೀಶಿರಡಿ ಸಾಯಿಬಾಬರವರ ಪಾದುಕ ದರ್ಶನ ಮಹೋತ್ಸವದಲ್ಲಿ ನಗರದ ಸಾವಿರಾರು ಭಕ್ತರು ಪಾದುಕದ ದರ್ಶನ ಪಡೆದರು.

ಶಿರಡಿಯ ಶ್ರೀಸಾಯಿಬಾಬ ಅವರು ಪರಿನಿರ್ವಾಣ ಹೊಂದಿ 100 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಆಯ್ದ ನಗರಗಳಲ್ಲಿ ಅವರು ಧರಿಸಿದ್ದ ಪಾದುಕಗಳ ದರ್ಶನಕ್ಕೆ ಸಾಯಿಬಾಬ ಸೇವಾ ಟ್ರಸ್ಟ್ ಅವಕಾಶ ಕಲ್ಪಿಸಿದ್ದು, ಇದರ ಭಾಗವಾಗಿ ತುಮಕೂರು ನಗರದಲ್ಲಿ ಮಾರ್ಚ 12-13 ರಂದು ಭಕ್ತರಿಗೆ ಪಾದುಕಗಳ ದರ್ಶನಕ್ಕೆ ಶ್ರೀಶಿರಡಿ ಸಾಯಿನಾಥ ಸೇವಾ ಸಮಿತಿ ಅವಕಾಶ ಕಲ್ಪಿಸಿತ್ತು.

ಮಾರ್ಚ್ 12ರ ಸೋಮವಾರ ಬೆಳಗ್ಗೆ 10:30 ರ ಸುಮಾರಿಗೆ ಬೆಂಗಳೂರಿನಿಂದ ಆಗಮಿಸಿದ ಪಾದುಕಗಳನ್ನು ನಗರದ ಎಸ್.ಐ.ಟಿ. ಮುಂಭಾಗದ ಗಂಗೋತ್ರಿ ನಗರದ ಬಳಿ ಶ್ರೀಶಿರಡಿ ಸಾಯಿನಾಥ ಸೇವಾ ಸಮಿತಿಯ ಪದಾಧಿಕಾರಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡರು.ನಂತರ ಜನಪದ ಕಲಾ ತಂಡ ಪ್ರದರ್ಶನದೊಂದಿಗೆ ಮೆರವಣಿಗೆ ಯಲ್ಲಿ ಪಾದುಕಗಳನ್ನು ಎಸ್.ಐ.ಟಿ ಮುಖ್ಯರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ, ರಾಧಾಕೃಷ್ಣ ರಸ್ತೆ, ಮಹಾತ್ಮಗಾಂಧಿ ರಸ್ತೆ, ವಿವೇಕಾನಂದ ರಸ್ತೆ, ಅಶೋಕರಸ್ತೆ ಮೂಲಕ ಟೌನ್ ಹಾಗೂ ಕುಣಿಗಲ್ ರಸ್ತೆಯ ಮೂಲಕ ರಾಮಕೃಷ್ಣ ನಗರದಲ್ಲಿರುವ ಶ್ರೀಶಿರಡಿ ಸಾಯಿ ಮಂದಿರಕ್ಕೆ ತರಲಾಯಿತು.

ಮಧ್ಯಾಹ್ನ 12:30ರ ಸುಮಾರಿಗೆ ದೇವಾಲಯಕ್ಕೆ ಆಗಮಿಸಿದ ಪಾದುಕಗಳ ದರ್ಶನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ಪಾದುಕಗಳ ದರ್ಶನ ಪಡೆದರು. ಪಾದುಕಗಳ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಶ್ರೀಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 

ನಗರದ ರಾಮಕೃಷ್ಣ, ವಿವೇಕಾನಂದ ಆಶ್ರಮದ ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ಅವರು ಪಾದುಕಗಳ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.

ಈ ವೇಳೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಶ್ರೀಶಿರಡಿ ಸಾಯಿನಾಥ ಸೇವಾ ಸಮಿತಿ ಕಾರ್ಯದರ್ಶಿ ಕೆ.ಎಸ್.ಗುರುಸಿದ್ದಪ್ಪ, ಡಾ.ಕವಿತಾಕೃಷ್ಣ, ಹೊನ್ನುಡಿಕೆ ಲೋಕೇಶ್, ಜಗಜೋತಿ ಸಿದ್ದರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News